ಅಥಣಿ: ತಾಲೂಕಿನ ಅಡಹಳ್ಳಟ್ಟಿ ಗ್ರಾಮದ ಯೋಧ ಲಾಯಪ್ಪ ನಂದೆಪ್ಪ ಚಿಕ್ಕಟ್ಟಿ (37) ಭಾನುವಾರ ಅನಾರೋಗ್ಯದಿಂದ ಮಹಾರಾಷ್ಟ್ರದ ಪುಣೆ ಕಮಾಂಡೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಂಗಳವಾರ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತಂದು ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಅಥಣಿಯಿಂದ ಅಡಹಳ್ಳಟ್ಟಿ ಮಾರ್ಗಮಧ್ಯೆ ತಹಸೀಲ್ದಾರ್ ಸುರೇಶ ಮುಂಜೆ ತಾಲೂಕಾಡಳಿತ ವತಿಯಿಂದ ಹಾರಹಾಕಿ ಗೌರವ ಸಲ್ಲಿಸಿದರು. ನೂರಾರು ಯುವಕರು ಹಾಗೂ ಮಾಜಿ ಸೈನಿಕರು ಬೈಕ್ ಮೂಲಕ ಲಾಯಪ್ಪ ಚಿಕ್ಕಟ್ಟಿ ಅವರ ಭಾವಚಿತ್ರ ಹಾಗೂ ರಾಷ್ಟ್ರಧ್ವಜದೊಂದಿಗೆ ಜೈ ಘೋಷ ಕೂಗಿದರು.
ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರ ಮೆರವಣಿಗೆ ಮಾಡಲಾಯಿತು. ತೋಟದ ಲಾಯಪ್ಪ ಚಿಕ್ಕಟ್ಟಿ ವಸತಿ ಪ್ರದೇಶದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪಾರ್ಥಿವ ಶರೀರದ ಮೇಲೆ ಹೊದಿಸಿದ ರಾಷ್ಟ್ರಧ್ವಜವನ್ನು ಸೈನಿಕರು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಗುಂಡು ಹಾರಿಸಿ ಗೌರವ ವಂದನೆ ಸಲ್ಲಿಸಿದರು. ತಾಯಿ ಶಿವನಿಂಗವ್ವ, ಪತ್ನಿ ಆಶಾರಾಣಿ, ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು.
ಮಾಜಿ ಶಾಸಕ ಶಾಹಾಜನ್ ಡೊಂಗರಗಾಂವ್, ವೈ. ಕೆ. ಕಾಶಪ್ಪನವರ, ಮರುಳಸಿದ್ಧ ಸ್ವಾಮೀಜಿ, ಸುಭೇದಾರ್ ಕಡಲಿ, ಪಿಎಸ್‌ಐ ಶಿವಶಂಕರ ಮುಕರಿ, ಗಜಾನನ ಮಂಗಸೂಳಿ, ಶಶಿಕಾಂತ ಮಹಾರಾಜರು, ಎಸ್ ಕೆ ಬುಟಾಳಿ, ಈರಗೌಡ ಪಾಟೀಲ, ಶ್ರೀಶೈಲ ತಾಂವಶಿ, ಸುನೀಲ ಕೆಂಚಣ್ಣವರ, ಶ್ರೀಕಾಂತ ಪೂಜಾರಿ ಸೇರಿದಂತೆ ಇತರರು ಇದ್ದರು.
Kshetra Samachara
21/09/2022 10:54 am