ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಭಾನುವಾರದಂದು ಜೋರಾಗಿದ್ದು, ಮತ್ತೆ ಬೆಳಗಾವಿ ಜಿಲ್ಲೆಯ ಹಲವೆಡೆ ಪ್ರವಾಹ ಭೀತಿ ಎದುರಾಗಿದೆ!
ಇಂದು ಮುಂಜಾನೆ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಗೋಕಾಕ, ಘಟಪ್ರಭಾ ಮತ್ತು ನಿಪ್ಪಾಣಿ ಭಾಗದಲ್ಲಿ ಧೋ ಅಂತಾ ಮಳೆ ಸುರಿಯುತ್ತಿದೆ. ಇದರಿಂದಾಗಿ ನದಿ, ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಈ ಹಿನ್ನೆಲೆ ಜಿಲ್ಲೆಯ 7 ಸೇತುವೆಗಳು ಈಗಾಗಲೇ ಮುಳುಗಡೆಯಾಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.
ಭಾರೀ ಮಳೆ ಸುರಿಯುತ್ತಿರುವುದರಿಂದ ಹಲವಾರು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಿರಣ್ಯಕೇಶಿ ನದಿ ಅಪಾಯದ ಮಟ್ಟ ಮೀರಿದ್ದು,
ಹುಕ್ಕೇರಿ-ಯರನಾಳ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲೆಯ ವಿವಿಧೆಡೆ ಐದು ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ.
ಬೆಳಗಾವಿ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಿಸಿದ್ದು, ಈಗ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಪರಿಣಾಮ
ಘಟಪ್ರಭಾ ನದಿಯಲ್ಲಿ 37 ಸಾವಿರ ಕ್ಯೂಸೆಕ್ಸ್ ಹರಿವು ಹೆಚ್ಚಾಗಿದೆ. ಹೀಗಾಗಿ ಗೋಕಾಕ್ ನಗರಕ್ಕೆ ಸಂಪರ್ಕಿಸುವ ಶಿಂಗಳಾಪೂರ ಸೇತುವೆ ಕೂಡಾ ಜಲಾವೃತಗೊಂಡಿದ್ದು, ಗೋಕಾಕ್ ತಾಲೂಕಿನ ಶಿಂಗಳಾಪೂರ ಗ್ರಾಮದ ಸಂಪರ್ಕ ಕಡಿತವಾಗಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಘಟಪ್ರಭೆ ನದಿಯಿಂದಾಗಿ ಮತ್ತೆ ಗೋಕಾಕ್ ನಗರ ಮುಳುಗುವ ಆತಂಕದಲ್ಲಿದೆ. ಹೀಗಾಗಿ ಪ್ರವಾಹ ಪೀಡಿತ ಹಾಗೂ ನದಿ ತಟ ಮತ್ತು ತೀರ ಪ್ರದೇಶಗಳಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ.
Kshetra Samachara
11/09/2022 09:27 pm