ಬೈಲಹೊಂಗಲ: 'ದೇವ್ರು ನನ್ನ ಪ್ರಾಣ ಬೇಕಾದ್ರು ತಗೋ ಬೇಕಿತ್ತು... ನನ್ನೆರಡು ಮಕ್ಕಳಂಗಿದ್ದ ಮೂಕ ಪ್ರಾಣಿಗಳ ಜೀವ ಯಾಕ ಹಿಂಗ್ ಅರ್ಧದಲ್ಲೇ ಪಡಿದೆಯೋ ಶಿವನ... ನಿಮಗೆ ಹೆಂಗರಾ ಮನಸ್ಸು ಬಂತೋ ಯಪ್ಪಾ... ಬಸವಣ್ಣ ಬಿಟ್ಟ ಹೋದ್ರಿ' ಎಂದು ಎದೆ ಬಡಿದುಕೊಂಡು ರೋಧಿಸುತ್ತಿದ್ದ ರೈತನ ಕುಟುಂಬಸ್ಥರ ಆಕ್ರಂದನ ಕರುಳ ಹಿಂಡುವಂತಿತ್ತು.
ಪಟ್ಟಣದ ಪ್ರಭುನಗರ ನಾಲ್ಕನೇ ಅಡ್ಡ ರಸ್ತೆ ನಿವಾಸಿ, ರೈತ ಮಹಿಳೆ ಸಾಬವ್ವ ಹುಡೇದ ಕುಟುಂಬಸ್ಥರಿಗೆ ಸೇರಿದ ಈ ಜೋಡೆತ್ತುಗಳ ಸಾವು ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾಯಿತು. ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಜೋಡೆತ್ತುಗಳ ಬೆಲಗ ಮುರಿದು ಹಗ್ಗ್ ಒಂದೊಕ್ಕೊಂದು ಸಿಲುಕಿಕೊಂಡು ಉಸಿರುಗಟ್ಟಿ ಕೊನೆಯುಸಿರೆಳೆದಿವೆ. ಜೋಡೆತ್ತುಗಳ ಆಕ್ರಂದನ ಮಾಲೀಕರಿಗೆ ತಿಳಿಯುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸುಮಾರು ಆರು ಲಕ್ಷ ಮೌಲ್ಯದ ಜೋಡೆತ್ತುಗಳು ಇವಾಗಿವೆ. ರೈತರ ಜಮೀನಿನಲ್ಲಿ ಸಕಲ ವಿಧಿ, ವಿಧಾನದಿಂದ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ದಾರಿಯುದ್ದಕ್ಕೂ ನೇಗಿಲ ಯೋಗಿಗೆ ನೆರವಾದ ಜೋಡೆತ್ತುಗಳು ಬಿತ್ತನೆ ಕಾರ್ಯ ಪೂರೈಸಿದ್ದನ್ನು ಸ್ಮರಿಸಲಾಯಿತು. ಘಟನಾ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಪಿ.ಎಂ.ಕಮ್ಮಾರ, ಪಶು ವೈದ್ಯ ಮಹೇಶ ಮೇಟಿ ಭೇಟಿ ನೀಡಿದರು. ಅಪಾರ ಜನ ಅಂತಿಮ ದರ್ಶನ ಪಡೆದು ಅಂತ್ಯ ಕ್ರಿಯೆಯಲ್ಲಿ ಭಾಗಿಯಾದರು.
PublicNext
04/10/2022 04:07 pm