ಬೆಳಗಾವಿ:ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರವು ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗಾಗಿ ಉಚಿತ ಇನ್ಸುಲಿನ ವಿತರಣಾ ಯೋಜನೆಯನ್ನು ಸಂಸ್ಥೆಯ ಕರ‍್ಯಾಧ್ಯಕ್ಷರು ಹಾಗೂ ಕಾಹೇರನ ಕುಲಾಧಿಪತಿಗಳಾದ ಡಾ. ಪ್ರಭಾಕರ ಕೋರೆ ಅವರು ಇಂದಿಲ್ಲಿ ಜನಸೇವೆಗೆ ಅರ್ಪಿಸಿದರು. ಅಸ್ಟ್ರೇಲಿಯಾದ ಲೈಫ್ ಫಾರ ಎ ಚೈಲ್ಡ್ ಹಾಗೂ ಕೆಎಲ್‌ಇ ಮಧುಮೇಹ ಕೇಂದ್ರ ಜೊತೆಗೂಡಿ ಈ ಯೋಜನೆಯನ್ನು ಜಾರಿಗೊಳಿಸಿವೆ.
ಉಚಿತ ಇನ್ಸುಲಿನ್ ವಿತರಣಾ ಯೋಜನೆಯನ್ನು ಜಾರಿಗೊಳಿಸಿ ಮಾತನಾಡಿದ ಡಾ. ಪ್ರಭಾಕರ ಕೋರೆ ಅವರು, 22 ವರ್ಷಗಳಿಂದ ಮಧುಮೇಹ ಪೀಡಿತ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿರುವದು ಐತಿಹಾಸಿಕ ಕಾರ್ಯ. ಈ ಹಿಂದೆ ಅಲ್ಲಲ್ಲಿ ಕಂಡು ಬರುತ್ತಿದ್ದ ಮಧುಮೇಹ ಇಂದು ಎಲ್ಲ ಮನೆಗಳಲ್ಲಿದೆ. ಚಿಕ್ಕ ಮಕ್ಕಳಿಗೆ ಚಿಕಿತ್ಸೆ ದುಬಾರಿಯಾಗಿ ಪರಿಣಮಿಸುತ್ತಿದ್ದು, ಮಧುಮೇಹ ಪೀಡಿತ ಮಕ್ಕಳ ಚಿಕಿತ್ಸಾ ವೆಚ್ಚ ನಿರಂತರವಾಗಿರುತ್ತದೆ. ಆದ್ದರಿಂದ ಕೈಗೆಟಕುವ ದರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೂ ಕೂಡ ಆರೋಗ್ಯ ಸೇವೆ ಕಲ್ಪಿಸಲಾಗುತ್ತಿದೆ. ಅತ್ಯಂತ ಶ್ರಮಜೀವಿಯಾದ ರೈತನಿಗೂ ಕೂಡ ಮಧುಮೇಹ ಬಂದೆರಗುತ್ತಿದೆ. ಇದಕ್ಕೆಲ್ಲ ಕಾರಣ ಆಹಾರ ಪದ್ದತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
45 ದಿನಗಳ ಹಸಗೂಸಿಗೆ ಇನ್ಸುಲಿನ್ ನೀಡುವದರೊಂದಿಗೆ ಪ್ರಾರಂಭವಾದ ಕಾರ್ಯ, ಇಂದು ಎಲ್ಲ ಸವಾಲುಗಳನ್ನು ಎದುರಿಸುವ ಶಕ್ತಿ ನೀಡಿ, ಮಧುಮೆಹ ಪಿಡಿತ ಮಕ್ಕಳು ಇನ್ಸುಲಿನ್ ಚಿಕಿತ್ಸೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸಕಲ ಕಾರ್ಯಕ್ಕೂ ಸಹಕಾರ ನೀಡುತ್ತಿದ್ದಾರೆ ಎಂದು ಸ್ಮರಿಸಿದರು.ಮಧುಮೇಹ ಕೇಂದ್ರದ ಡಾ. ಸುಜಾತಾ ಜಾಲಿ ಅವರು ಮಾತನಾಡಿ, ಕೇಂದ್ರದ ಕಾರ್ಯ ಗಮನಿಸಿ, ಆಸ್ಟ್ರೇಲಿಯಾದ ಸಂಸ್ಥೆಯು ಇನ್ಸುಲಿನ ನೀಡಿದ್ದು, ಎಲ್ಲ ಮಕ್ಕಳಿಗೆ ಉಚಿತವಾಗಿ ಪೂರೈಸಲು ಕ್ರಮಕೈಕೊಳ್ಳಲಾಗಿದೆ.
ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ಮಕ್ಕಳ ಅನುಕೂಲಕ್ಕಾಗಿ ಈ ಕಾರ್ಯ ಆರಂಭಿಸಿದ್ದು ಕೆಎಲ್‌ಇ ಮಧುಮೇಹ ಕೇಂದ್ರವು 59 ದೇಶಗಳಲ್ಲಿಯೇ ಅತ್ಯುತ್ತಮ ಆರೈಕಾ ಪ್ರಥಮ ಶ್ರೇಣಿಯ ಕೇಂದ್ರವಾಗಿ ಹೊರಮ್ಮಿದೆ. ಪಾಲಕರು ತೋರುವ ಕಾಳಜಿ ಅತ್ಯಂತ ಖುಷಿ ನೀಡುತ್ತಿದ್ದು, ಡಾ. ಪ್ರಭಾಕರ ಕೋರೆ ಅವರ ಸಾಮಾಜಿಕ ಕಳಕಳಿ ಕಾರ್ಯ ಅತೀವ ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.
Kshetra Samachara
29/09/2022 01:19 pm