ಬೆಳಗಾವಿ: ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆಯಿಂದ ಅನೇಕ ಅವಾಂತರ ಸೃಷ್ಟಿಯಾಗಿ ಮನೆಗಳ ಗೋಡೆ ಬಿದ್ದು ಸಾವುನೋವುಗಳು ಸಂಭವಿಸಿವೆ. ಅದೇ ರೀತಿ ಬೆಳಗಾವಿಯಲ್ಲಿ ಮಹಿಳೆಯೊಬ್ಬರ ಮೇಲೆ ಮನೆ ಗೋಡೆ ಕುಸಿದು ಬಿದ್ದ ಪರಿಣಾಮ ಮಹಿಳೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಘಟನೆ ಬೆಳಗಾವಿಯ ಕಿತ್ತೂರಲ್ಲಿ ನಡೆದಿದೆ.
ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಪಟ್ಟಣದ 32 ವಯಸ್ಸಿನ ಮಹಿಳೆ ಕಾಳಮ್ಮ ಮಹಾರುದ್ರಪ್ಪ ಕಮ್ಮಾರ ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ಮಧ್ಯಾಹ್ನ ಊಟಕ್ಕೆ ಅಂತ ರೊಟ್ಟಿ ಮಾಡುತ್ತಿದ್ದ, ವೇಳೆ ಮಳೆಗೆ ನೆನೆದ ಗೋಡೆ ಮತ್ತು ಚಾವಣಿ ಏಕಾಏಕಿ ಕುಸಿದಿದ್ದು, ಮಣ್ಣಿನಡಿ ಸಿಲುಕಿ ಚಿರಾಡುತ್ತಿದ್ದ ಮಹಿಳೆ ಕಾಳಮ್ಮನನ್ನು ಸ್ಥಳೀಯರು ಹರಸಾಹಸ ಪಟ್ಟು ಹೊರತೆಗೆದಿದ್ದಾರೆ.
ಗೋಡೆ ಮತ್ತು ಚಾವಣಿ ಕುಸಿತದ ರಭಸಕ್ಕೆ ಮಹಿಳೆಯ ಕಾಲು ಮುರಿದಿದ್ದು, ಗಂಭೀರ ಗಾಯಗೊಂಡಿದ್ದಾಳೆ. ಬೆಳಗಾವಿಯ ಖಾಸಗಿ ಆಸ್ಫತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನಾ ಸ್ಥಳಕ್ಕೆ ಕಿತ್ತೂರು ತಹಶೀಲ್ದಾರ ಸೋಮಲಿಂಗಪ್ಪ ಹಾಲಗಿ, ಕಂದಾಯ ನಿರೀಕ್ಷಕ ವಿ. ಬಿ. ಬಡಗಾಂವಿ ತಕ್ಷಣ ಭೇಟಿನೀಡಿ ಪರಿಶೀಲಿಸಿ, ಸರ್ಕಾರದಿಂದ ಸಿಗುವ ಸೌಲಭ್ಯ, ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ಭರವಸೆ ನೀಡಿದ್ದಾರೆ.
PublicNext
03/10/2022 10:08 pm