ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಜುಲೈ 22ರಂದು (ನಾಳೆ) ವಿಚಾರಣೆ ನಡೆಯಲಿದ್ದು, ಸರ್ಕಾರ ಅಂತಿಮ ಅಧಿಸೂಚನೆಯ ಪ್ರತಿಯನ್ನು ಸಲ್ಲಿಸಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಆಕ್ಷೇಪಿಸಲಿದೆ.
ಸುಪ್ರೀಂ ಕೋರ್ಟ್ ಎಂಟು ವಾರಗಳಲ್ಲಿ ವಾರ್ಡ್‌ಗಳ ಮರುವಿಂ ಗಡಣೆ ಮಾಡಿ, ಮೀಸಲಾತಿಯನ್ನು ನಿಗದಿಪಡಿಸಿ, ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಎಂಟು ವಾರಗಳು ಮುಗಿದಿದ್ದು, ಸುಪ್ರೀಂ ಕೋರ್ಟ್ ಹಿಂದಿನ ಆದೇಶದಲ್ಲಿ ತಿಳಿಸಿದಂತೆಯೇ ನಾಳೆ ಇದರ ವಿಚಾರಣೆ ನಡೆಯಲಿದೆ.
‘ಸುಪ್ರೀಂ ಕೋರ್ಟ್ ಆದೇಶದಂತೆ ನಾವು ಸರ್ಕಾರದ ಅಂತಿಮ ಅಧಿ ಸೂಚನೆಗೆ ಕಾಯುತ್ತಿದ್ದೇವೆ. ಸರ್ಕಾರ ಈವರೆಗೆ ಯಾವುದೇ ಮಾಹಿತಿ ಅಥವಾ ಅಧಿಸೂಚನೆಯ ಪ್ರತಿಯನ್ನು ನಮಗೆ ನೀಡಿಲ್ಲ. ಹೀಗಾಗಿ ನಮ್ಮ ಆಕ್ಷೇಪವನ್ನು ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಸಲ್ಲಿಸಲಿದ್ದೇವೆ’ ಎಂದು ರಾಜ್ಯ ಚುನಾವಣೆ ಆಯೋಗದ ಆಯುಕ್ತ ಬಿ. ಬಸವರಾಜು ಮಾಹಿತಿ ತಿಳಿಸಿದರು.
ಬಿಬಿಎಂಪಿಯ 198 ವಾರ್ಡ್‌ಗಳನ್ನು 243 ವಾರ್ಡ್‌ಗಳಾಗಿ ಪುನರ್ ವಿಂಗಡಣೆ ಮಾಡಿ, ರಾಜ್ಯ ಸರ್ಕಾರ ಜುಲೈ 14ರಂದು ಅಂತಿಮ ಅಧಿಸೂಚನೆ ಹೊರಡಿಸಿದೆ. ಆದರೆ, ವಾರ್ಡ್‌ಗಳ ಮೀಸಲಾತಿ ನಿಗದಿಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಅಧಿಸೂಚನೆ ಹೊರಬಿದ್ದಿಲ್ಲ. ವಾರ್ಡ್ ಗಳ ಮೀಸಲಾತಿ ಬಗ್ಗೆ ವರದಿ ಸಲ್ಲಿಸಲು ನ್ಯಾಯಮೂರ್ತಿ ಭಕ್ಸವತ್ಸಲಂ ನೇತೃತ್ವದ ಸಮಿತಿಯನ್ನು ಸರ್ಕಾರ ರಚಿಸಿದೆ.
PublicNext
21/07/2022 02:11 pm