ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಜಾಹೀರಾತು ಫಲಕ ಅಳವಡಿಸಲು ಅವಿನಾಶಿ ಆ್ಯಡ್ಸ್‌ಗೆ ಅಕ್ರಮವಾಗಿ ಅನುಮತಿ ನೀಡಿರುವ ಆರೋಪ ಕೇಳಿ ಬಂದಿದೆ.
ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ವಕ್ತಾರ ಕೆ.ಮಥಾಯ್, “ಅವಿನಾಶಿ ಆ್ಯಡ್‌ಗೆ ಹೋರ್ಡಿಂಗ್ ಅಳವಡಿಸಲು ನೀಡಿದ ಸ್ಥಳವು ಬಿಬಿಎಂಪಿಗೆ ಸೇರಿದ್ದಾಗಿದೆ. ಆದ್ದರಿಂದ ಅಲ್ಲಿ ಅವಿನಾಶಿ ಆ್ಯಡ್ಸ್‌ಗೆ ಅನುಮತಿ ನೀಡುವ ಹಕ್ಕು ಬಿಡಿಎಗೆ ಇರುವುದಿಲ್ಲ. ಅಲ್ಲದೇ, ಇದು ಹೈಕೋರ್ಟ್ ಆದೇಶದ ಉಲ್ಲಂಘನೆ ಕೂಡ ಆಗಿರುತ್ತದೆ. ನಮಗಿರುವ ಮಾಹಿತಿಯ ಪ್ರಕಾರ, ಬಿಬಿಎಂಪಿಯ ಅಂದಿನ ಕಮಿಷನರ್ ಮಂಜುನಾಥ್ ಪ್ರಸಾದ್ ಅವರು ಅವಿನಾಶಿ ಆ್ಯಡ್ಸ್‌ಗೆ ಯಾವುದೇ ಅನುಮತಿಯನ್ನು ನೀಡಿರುವುದಿಲ್ಲ. ಆದರೆ ಬಿಡಿಎ ಹಾಗೂ ಬಿಬಿಎಂಪಿಯಲ್ಲಿ ಭ್ರಷ್ಟ ಅಧಿಕಾರಿಗಳ ನೆರವಿನಿಂದ ಅವಿನಾಶಿ ಆ್ಯಡ್ಸ್ ಅಕ್ರಮವಾಗಿ ಜಾಹೀರಾತು ಹಕ್ಕನ್ನು ಪಡೆದುಕೊಂಡಿದೆ” ಎಂದು ಹೇಳಿದರು.
“ಬಿಬಿಎಂಪಿಗೆ ಸೇರಿದ ಜಾಗದಲ್ಲಿ ಜಾಹೀರಾತು ಫಲಕ ಹಾಕುವ ಹಕ್ಕನ್ನು ಅವಿನಾಶಿ ಆ್ಯಡ್ಸ್‌ಗೆ ಬಿಡಿಎ ಹೇಗೆ ನೀಡಿತು? ಬಿಬಿಎಂಪಿ ಸ್ವತ್ತಿಗೆ ಸಂಬಂಧಿಸಿ ಬಿಡಿಎ ಹೇಗೆ ಗುತ್ತಿಗೆ ನೀಡಿತು? ತನ್ನದೇ ತೋಟಗಾರಿಕೆ ವಿಭಾಗವನ್ನು ಬಿಡಿಎ ಹೊಂದಿರುವಾಗ ಆ ಗಾರ್ಡನ್ ನಿರ್ವಹಣೆಯನ್ನು ಪಿಪಿಪಿ ಯೋಜನೆಯಡಿ ನೀಡಲು ಕಾರಣವೇನು? ಬಿಬಿಎಂಪಿಯ ಜಾಹೀರಾತು ಫಲಕಗಳ ಗಾತ್ರದ ಗರಿಷ್ಠ ಮಿತಿ 40*20 ಆಗಿರುವಾಗ, 80*80 ಫಲಕಕ್ಕೆ ಅವಕಾಶ ನೀಡಿರುವುದೇಕೆ? ಹೆಬ್ಬಾಳ ಮೇಲ್ಸೇತುವೆಯು ಎನ್‌ಎಚ್‌ಎಐ ಅಡಿಯಲ್ಲಿ ಬರುವುದರಿಂದ, ರಾಷ್ಟ್ರೀಯ ಹೆದ್ದಾರಿ ಸಮೀಪ ಹೋರ್ಡಿಂಗ್‌ಗೆ ಅವಕಾಶ ನೀಡಲು ಹೇಗೆ ಸಾಧ್ಯವಾಯಿತು? ಕೇವಲ ಎರಡು ಎಕರೆ ಪ್ರದೇಶದಲ್ಲಿ 60 ಹೋರ್ಡಿಂಗ್‌ಗಳಿಗೆ ಅನುಮತಿ ನೀಡಿರುವುದೇಕೆ? ಸಾರ್ವಜನಿಕರಿಗೆ ಸಹಾಯವಾಗುವಂತಹ ಮೂಲಸೌಕರ್ಯಗಳ ಅಭಿವೃದ್ಧಿಗೆ ಪಿಪಿಪಿ ಯೋಜನೆ ಬಳಸಲಾಗುತ್ತದೆ. ಗಾರ್ಡನ್ ನಿರ್ವಹಣೆಯನ್ನು ಪಿಪಿಪಿ ಯೋಜನೆಯೆಂದು ಪರಿಗಣಿಸಲು ಹೇಗೆ ಸಾಧ್ಯ?” ಎಂದು ಕೆ.ಮಥಾಯ್ ಪ್ರಶ್ನಿಸಿದರು.
“ಬಿಡಿಎ ಕಮಿಷನರ್ 5.12.2018ರಂದು ಬರೆದ ಪತ್ರ ಸಂಖ್ಯೆ 3/BDA/Comm/EM/EO-3/EE(ID/T-29/2018-19 ಹಾಗೂ ಬಿಬಿಎಂಪಿಯ 28.11.2019ರ ಪತ್ರ ಸಂಖ್ಯೆ AC(Advt)/PR/409/2018-19 – ಈ ಎರಡು ಸುತ್ತೋಲೆಗಳಲ್ಲಿ ಗಮನಿಸಿದರೆ ಬಿಡಿಎ ಹಾಗೂ ಬಿಬಿಎಂಪಿ ಅಕ್ರಮದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗುತ್ತದೆ” ಎಂದು ಕೆ.ಮಥಾಯ್ ಹೇಳಿದರು.
Kshetra Samachara
06/06/2022 04:27 pm