Exclusive ವರದಿ: ಪ್ರವೀಣ್ ಎನ್. ರಾವ್
ಬೆಂಗಳೂರು: ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸಲು ಮುಂದಾದ ರಾಜ್ಯ ಸರ್ಕಾರ 198 ವಾರ್ಡ್‌ಗಳನ್ನು 243 ವಾರ್ಡ್‌ಗಳನ್ನಾಗಿ ಪುನರ್ ವಿಂಗಡಿಸಿ ಜೂನ್ 23 ರಂದು ಕರಡು ಪ್ರತಿ ಬಿಡುಗಡೆ ಮಾಡಿತ್ತು. ಜೊತೆಗೆ ಸಾರ್ವಜನಿಕರಿಂದ ಆಕ್ಷೇಪಣೆಗಳ ಸಲ್ಲಿಕೆಗೆ 15 ದಿನಗಳ ಕಾಲಾವಕಾಶ ನೀಡಿತ್ತು. ಈ ಅವಧಿ ನಿನ್ನೆ (ಜುಲೈ7) ಸಾಯಂಕಾಲಕ್ಕೆ ಮುಕ್ತಾಯವಾಗಿದ್ದು ಸುಮಾರು 2,500ಕ್ಕೂ ಅಧಿಕ ಆಕ್ಷೇಪಣೆಗಳ ರಾಶಿ ಹರಿದುಬಂದಿದೆ. ಈ ಆಕ್ಷೇಪಣೆಗಳ ಕ್ರೋಢೀಕರಣ ಕಾರ್ಯವು ವಿಕಾಸಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ಶುಕ್ರವಾರದಿಂದ ಆರಂಭವಾಗಿದೆ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನೇತೃತ್ವದಲ್ಲಿ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿಯು ಬಂದಿರುವ 2,500ಕ್ಕೂ ಅಧಿಕ ಆಕ್ಷೇಪಣೆಗಳು, ದೂರುಗಳು, ಸಲಹೆಗಳನ್ನು ದಾಖಲಿಸಿ ಕ್ರೋಢೀಕರಿಸುವ ಕಾರ್ಯದಲ್ಲಿ ತೊಡಗಿದೆ. ಇದು ಇನ್ನೂ 4-5 ದಿನಗಳ ಕಾಲ ನಡೆಯಲಿದೆ ಎಂದು ತಿಳಿದುಬಂದಿದೆ.
Kshetra Samachara
09/07/2022 07:50 am