ಬೆಂಗಳೂರು: ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕು ಪಂಚಾಯ್ತಿ ಆವರಣದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕುರಿತ ತಾಲೂಕು ಮಟ್ಟದ ಪೂರ್ವಭಾವಿ ಸಭೆ ಇಂದು ನಡೆಯಿತು.
ಮೇ 28ರಂದು ದೇವನಹಳ್ಳಿಲಿ ತಾಲೂಕು ಮಟ್ಟದ "ಅಮೃತ ಭಾರತಿ- ಕನ್ನಡ ಆರತಿ" ಕಾರ್ಯಕ್ರಮ ನಡೆಯಲಿದೆ. ಇದರಂಗವಾಗಿ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ತಹಶೀಲ್ದಾರ್ ಶಿವರಾಜ್ ಮಾತನಾಡಿದರು. ಸ್ವಾತಂತ್ರ್ಯ ದಿನಾಚರಣೆಯ ಈ ಕಾರ್ಯಕ್ರಮ ದೇವನಹಳ್ಳಿಯ ಪ್ರತಿ ವಾರ್ಡ್ ನಲ್ಲಿ ಪುರಸಭೆ ಸದಸ್ಯರು ರಥ ಅಲಂಕರಿಸಿ ಚಾಲನೆ ನೀಡಬೇಕು. ಆ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಸಾರ್ಥಕಗೊಳಿಸಬೇಕು ಎಂದರು.
ಜಿಲ್ಲೆ, ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರನ್ನು ಗುರ್ತಿಸಿ ಅವರ ಕುಟುಂಬದವರನ್ನು ಗೌರವಿಸಬೇಕು. ಬೆಳಗ್ಗೆ 9ಕ್ಕೆ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದಿಂದ ಕಲಾತಂಡಗಳೊಂದಿಗೆ ಭುವನೇಶ್ವರಿ ದೇವಿ ಹಾಗೂ ಭಾರತ ಮಾತೆಯ ಭಾವಚಿತ್ರ ಇಟ್ಟು ಮೆರವಣಿಗೆ ಸಾಗಬೇಕು. 11 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆರಂಭಿಸಿ 1 ಗಂಟೆಗೆ ಮುಕ್ತಾಯಗೊಳಿಸಬೇಕು. ಇದನ್ನು ಹಬ್ಬದ ದಿನವನ್ನಾಗಿ ಆಚರಿಸಬೇಕೆಂದರು.
ಈ ಸಂದರ್ಭ ಜಿಲ್ಲಾ ಕಸಾಪ ಅಧ್ಯಕ್ಷ BN ಕೃಷ್ಣಪ್ಪ, ತಾಲೂಕು ಅಧ್ಯಕ್ಷ ನಂಜೇಗೌಡ, ತಾಪಂ ಸಹಾಯಕ ನಿರ್ದೇಶಕ ಸುನಿಲ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
24/05/2022 10:35 pm