ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಕನ್ನಡದ ಹಿರಿಯ ಸಾಹಿತಿ ,ಹೋರಾಟಗಾರ ಚಂಪಾ ವಿಧಿವಶ

ಬೆಂಗಳೂರು: ಕವಿ, ನಾಟಕಕಾರ, ಕನ್ನಡಪರ ಹೋರಾಟಗಾರ ಡಾ.ಚಂದ್ರಶೇಖರ ಪಾಟೀಲ್ (ಚಂಪಾ) ಇಂದು ಮುಂಜಾನೆ ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. 83 ವರ್ಷ ವಯಸ್ಸಿನ ಚಂಪಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮೂಲತಃ ಹಾವೇರಿ ಜಿಲ್ಲೆಯವರಾದ ಚಂಪಾ, 2017ರಲ್ಲಿ ಮೈಸೂರಿನಲ್ಲಿ ನಡೆದ 83ನೇ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

ಸಾಹಿತ್ಯ ಲೋಕದಲ್ಲಿ ಚಂಪಾ ಎಂಬ ಕಾವ್ಯನಾಮದಿಂದ ಪ್ರಖ್ಯಾತರಾಗಿದ್ದ ಪ್ರೊ.ಚಂದ್ರಶೇಖರ್ ಪಾಟೀಲ್, ಚಂಪಾ ಸಂಕ್ರಮಣ ಪತ್ರಿಕೆಯ ಸಂಪಾದಕರಾಗಿದ್ದರು. ಕನ್ನಡದ ವಿಚಾರಗಳು ಸದ್ದು ಮಾಡುತ್ತಿದ್ದಾಗ ಮುಂಚೂಣಿಯಲ್ಲಿದ್ದು, ಭಾಷೆಯ ಪರವಾಗಿ ಹೋರಾಟ ನಡೆಸುತ್ತಿದ್ದರು. ಪುಸ್ತಕ ಸಂತೆ, ಗಡಿನಾಡು ಕನ್ನಡಿಗರ ಪರವಾಗಿ ಚಂಪಾ ಅವರು ಹೋರಾಟ ನಡೆಸಿದ್ದರು. ಸರ್ಕಾರಗಳ ಜನವಿರೋಧಿ ನೀತಿಯ ವಿರುದ್ಧ ತಮ್ಮ ಬರಹಗಳಿಂದಲೇ ಎಚ್ಚರಿಸಿ ಜನಪರವಾಗಿ ನಿಲ್ಲುತ್ತಿದ್ದ ಚಂಪಾ ಅವರು, ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

ಚಂಪಾ ಅವರು ಕನ್ನಡದ ಕವಿಯಾಗಿ, ನಾಟಕಕಾರರಾಗಿ, ಸಂಘಟನಕಾರರಾಗಿ, ಪತ್ರಿಕಾ ಸಂಪಾದಕರಾಗಿ, ಆಡಳಿತಗಾರರಾಗಿ, ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಚಂದ್ರಶೇಖರ್ ಪಾಟೀಲ್ 1939 ಜೂನ್‌ 18ರಂದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ ಜನಿಸಿದರು. ತಂದೆ ಬಸವರಾಜ ಹಿರೇಗೌಡರು, ತಾಯಿ ಮುರಿಗೆವ್ವ.

ಅವರ ಕನ್ನಡ ಸಾಹಿತ್ಯ ಕ್ಷೇತ್ರದ ಕೊಡುಗೆಗಾಗಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳ ಗೌರವಕ್ಕೆ ಭಾಜನರಾಗಿದ್ದರು.

Edited By :
Kshetra Samachara

Kshetra Samachara

10/01/2022 12:40 pm

Cinque Terre

572

Cinque Terre

0