ಬೆಂಗಳೂರು: ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಆಗಸ್ಟ್ 5 ರಿಂದ 15 ರವರೆಗೆ ಫಲ ಪುಷ್ಪ ಪ್ರದರ್ಶನ ನಡೆಯಲಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದರು.
ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಫಲ ಪುಷ್ಪ ಪ್ರದರ್ಶನ ಸ್ಥಗಿತಗೊಂಡಿತ್ತು. ಈ ವರ್ಷದಿಂದ ಮತ್ತೆ ಆರಂಭವಾಗುತ್ತಿರುವ ಫಲ ಪುಷ್ಪ ಪ್ರದರ್ಶನವನ್ನು ಜನಪ್ರಿಯ ಸಿನಿಮಾ ನಟರು ಮತ್ತು ಕರ್ನಾಟಕದ ಸಾಂಸ್ಕೃತಿಕ ಐಕಾನ್ ಗಳು ಎಂದು ಖ್ಯಾತರಾದ ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಲಾಗಿದೆ ಎಂದು ಮುನಿರತ್ನ ತಿಳಿಸಿದರು.
ಆಗಸ್ಟ್ 5 ರಂದು ಲಾಲ್ ಬಾಗ್ ನಲ್ಲಿ 212ನೇ ಫಲ ಪುಷ್ಪ ಪ್ರದರ್ಶನವನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಒಟ್ಟು 11 ದಿನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್ ಕುಟುಂಬಸ್ಥರು ಪಾಲ್ಗೊಳ್ಳಲಿದ್ದಾರೆ. 2 ವರ್ಷದ ಬಳಿಕ ಫಲ ಪುಷ್ಪ ಪ್ರದರ್ಶನ ಆಯೋಜನೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಲಾಲ್ ಬಾಗ್ ಪ್ರವೇಶ ದರ ಕಡಿಮೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
Kshetra Samachara
03/08/2022 03:51 pm