ದೇವನಹಳ್ಳಿ: ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ಒಂದ್ಕಡೆ ಭೂಮಿ ತಂಪಾಗಿದೆ. ಬೇಸಿಗೆಯ ಸುಡುಬಿಸಿಲು ಮಾಯವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯೆಲ್ಲ ಮಲೆನಾಡ ಭಾಗದಂತೆ ಭಾಸವಾಗುತ್ತಿದೆ. ಮುಂಗಾರು ಪೂರ್ವ ಮಳೆ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಸಲ ಈ ಮಟ್ಟಕ್ಕೇ ಸುರಿಯುತ್ತಿದೆ. ಹಬ್ಬ, ಜಾತ್ರೆ ಅಧಿಕವಾಗಿರುವ ಮೇ ತಿಂಗಳಲ್ಲೇ ನಿರೀಕ್ಷೆಗೂ ಮೀರಿ ಮಳೆಯಾಗುತ್ತಿದ್ದು, ಕೆರೆಕುಂಟೆಗಳು ಮೈತುಂಬಿಕೊಳ್ಳಲು ಕಾತುರವಾಗಿವೆ.
ಇಂದು ಸಂಜೆ ಸುರಿದ ಬಿರುಮಳೆಗೆ ದೇವನಹಳ್ಳಿ ರಸ್ತೆಗಳೆಲ್ಲ ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಯ್ತು. ರಸ್ತೆ ಬದಿ ನಿಲ್ಲಿಸಿದ್ದ ವಾಹನ ಕೆಳಗೆ ಬಿದ್ದಿವೆ ಎಂದರೆ ಮಳೆಯ ತೀವ್ರತೆ ಅರ್ಥ ಮಾಡಿಕೊಳ್ಳಿ! ಇನ್ನು ಹೊಸಕೋಟೆ ಗಡಿ ಭಾಗದ ಅನುಗೊಂಡನಹಳ್ಳಿ, ಗಣಗಲೂರು ಗ್ರಾಮ ಪಂಚಾಯ್ತಿ ಹಳ್ಳಿಗಳು, ಸರ್ಜಾಪುರ, ಚಿಕ್ಕತಿರುಪತಿ, ಸಂಪಂಗೆರೆ ಸುತ್ತಮುತ್ತ ಭಾರಿ ಮಳೆಯಾಗಿದ್ದು, ನೂರಾರು ಎಕರೆ ಬೆಳೆ ಸಂಪೂರ್ಣ ನಾಶವಾಗಿದೆ.
ತರಕಾರಿ, ತೋಟಗಾರಿಕೆ ಬೆಳೆ ದಿಢೀರ್ ಮಳೆಗೆ ನಾಶವಾದ್ದರಿಂದ ಟೊಮ್ಯಾಟೊ, ಬೀನ್ಸ್, ಕ್ಯಾರೆಟ್ ಸೇರಿ ಎಲ್ಲಾ ವಾಣಿಜ್ಯ ಬೆಳೆಗಳ ರೇಟ್ 100 ರೂ. ಗಡಿ ತಲುಪುತ್ತಿದೆ. ಇದರಿಂದ ರೈತರಿಗೂ ಬೆಳೆ ನಷ್ಟ, ಗ್ರಾಹಕರ ಜೇಬಿಗೂ ಭಾರಿ ಕಷ್ಟ. ಒಂದು ಕೆ.ಜಿ. ಟೊಮ್ಯಾಟೊ 100ರ ಗಡಿ ತಲುಪಿದ್ದರಿಂದ ಟೊಮ್ಯಾಟೊ- ತರಕಾರಿ ಬದಲಿಗೆ ಗ್ರಾಹಕರು ಚಿಕನ್ ಹಾಗೂ ಇತರ ಆಹಾರದತ್ತ ಮುಖ ಮಾಡಿದ್ದಾರೆ.
PublicNext
16/05/2022 11:01 pm