ವರದಿ - ಗಣೇಶ್ ಹೆಗಡೆ
ಬೆಂಗಳೂರು : ನಾಡಪ್ರಭು ಕೆಂಪೇಗೌಡ ಲೇಔಟ್ ಗೋಳು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ದಿನಕ್ಕೊಂದು ಸಮಸ್ಯೆ ಸೃಷ್ಟಿಯಾಗುತ್ತಿದೆ, ಇದೀಗ ಮಳೆಯಿಂದ ಹೊಸ ಸಮಸ್ಯೆಯನ್ನು ತಂದೊಡ್ಡಿದೆ. ಬಡಾವಣೆಯಲ್ಲಿ ನಿರ್ಮಾಣಗೊಳ್ಳುತ್ತಿರುವ , ಕಿರು ಸೇತುವೆ ಮತ್ತು ಚರಂಡಿ ಕಾಮಗಾರಿಗಳು ಪೂರ್ಣಗೊಳ್ಳದೆ ಮಳೆ ನೀರು ನುಗ್ಗಿ ಬಡಾವಣೆ ಕೆಲವೆಡೆ ನೀರು ನಿಂತು ಕೆರೆಯಂತಾಗಿದೆ.
ಕೆಂಪೇಗೌಡ ಬಡಾವಣೆಯಲ್ಲಿ 29 ಕಿ.ಮೀ. ರಾಜಕಾಲುವೆ ನಿರ್ಮಾಣಕ್ಕೆ ಯೋಜಿಸಲಾಗಿದ್ದು ಈಗಾಗಲೇ 24 ಕಿ.ಮೀ ಕಾಮಗಾರಿ ಮುಗಿದಿದೆ. ಆದರೆ, ಕೆಲವೆಡೆ ಭೂವಿವಾದದಿಂದ ಭೂಸ್ವಾಧೀನ ಮಾಡಿಕೊಳ್ಳದೇ ಇರುವ ಕಾರಣ ರಾಜಕಾಲುವೆ ಕಾಮಗಾರಿ ಮುಂದುವರೆದಿಲ್ಲ. ಹಾಗೆಯೇ ಇಡೀ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ 62 ರಿಂದ 65 ಕಿರು ಸೇತುವೆಗಳ ಪೈಕಿ ಕೇವಲ 24 ರಿಂದ 32 ಕಿರು ಸೇತುವೆಗಳು ಪೂರ್ಣಗೊಂಡಿದ್ದು ಇನ್ನೂ 37 ಕಿರು ಸೇತುವೆಗಳ ಕಾಮಗಾರಿ ಬಾಕಿ ಉಳಿದಿದೆ. ಬಡಾವಣೆಯ ಹಲವು ಚರಂಡಿಗಳ ಕಾಮಗಾರಿ ಪೂರ್ಣಗೊಂಡಿಲ್ಲ. ಬಹುತೇಕ ಚರಂಡಿಗಳ ಅರ್ಧ ಮಾತ್ರ ಆಗಿದ್ದು ಉಳಿದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕಿದೆ.
ಅಪೂರ್ಣ ಕಾಮಗಾರಿಯಿಂದಾಗಿ ಮೊನ್ನೆ ಸುರಿದ ಮಳೆಯಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಿಂದ ರಾಜಕಾಲುವೆ, ಚರಂಡಿಗಳಲ್ಲಿ ಹರಿದು ಬಂದ ನೀರು ಬಡಾವಣೆಗೆ ನುಗ್ಗಿದೆ. ಎಲ್ಲೆಲ್ಲಿ ರಾಜಕಾಲುವೆ ಮತ್ತು ಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲವೋ ಎಲ್ಲೆಲ್ಲಾ ನೀರು ಹೊರಗೆ ಹರಿದಿದ್ದು ಕಾಮಗಾರಿಗೆಂದು ಅಗೆದ ಜಾಗದಲ್ಲಿ ತುಂಬಿಕೊಂಡು ಕೆಸರು ಗದ್ದೆಯಂತಾಗಿದೆ. ಇನ್ನು ಕೆಲವೆಡೆ ತಗ್ಗು ಗುಂಡಿಗಳಿಗೆ ನೀರು ಹರಿದು ತುಂಬು ಗುಂಡಿಯಂತಾಗಿದೆ.
ಹೀಗೆ ನಿರಂತರವಾಗಿ ಬಡಾವಣೆಯಲ್ಲಿ ನೀರು ನಿಲ್ಲುವುದರಿಂದ ಭವಿಷ್ಯದಲ್ಲಿ ಮನೆ ಕಟ್ಟಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣ ಆಗುವ ಸಾಧ್ಯತೆ ಇದೆ. ನೀರು ನಿಲ್ಲುವಂತ ಜಾಗಗಳಲ್ಲೇ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್ ಕಂಬಗಳನ್ನು ನೆಡಲಾಗಿದ್ದು, ತೊಂದರೆಯಾದರೆ ಎಂಬ ಆತಂಕ ಇಲ್ಲಿನ ನಿವೇಶನಗಳ ಮಾಲಿಕರನ್ನು ಕಾಡಲು ಆರಂಭಿಸಿದೆ.
PublicNext
03/05/2022 07:43 pm