ಬೆಂಗಳೂರು: ಕಳೆದ ಎರಡು ದಿನಗಳಿಂದ ಬೆಂಗಳೂರು ಸುತ್ತಮುತ್ತ ಭಾರಿ ಬಿಸಲ ಬೇಗೆಯ ನಡುವೆ ಮೋಡಕವಿದ ವಾತಾವರಣ ಆವರಿಸಿದೆ. ವಾರದ ಹಿಂದೆ ಮೂರು ದಿನ ಬಿಟ್ಟುಬಿಡದೆ ಸುರಿದಿದ್ದ ಮಳೆರಾಯ ವಾರದಿಂದ ಬಿಡುವು ಕೊಟ್ಟಿದ್ದ.
ಇದೀಗ ಬೆಂಗಳೂರಿನಾದ್ಯಂತ ಭಾರಿ ಮೋಡಗಳ ಸದ್ದುಗದ್ದಲದ ಮಳೆ ಶುರುವಾಗಿದೆ. ಇಂದು ಸಂಜೆ ನಾಲ್ಕು ಗಂಟೆಯ ನಂತರ ಬೆಂಗಳೂರಿನ ಆಗಸ ಮೋಡಗಳಿಂದ ಆವೃತವಾಗಿ ಸಿಡಲಬ್ಬರದ ಶಬ್ದವೇ ಜೋರಾಗಿದೆ.
ಭಾರಿ ಮಳೆಯ ಮುನ್ಸೂಚನೆ ಸಿಕ್ಕಿದ್ದು ತಗ್ಗು ಪ್ರದೇಶಗಳ ರಸ್ತೆ, ಮನೆಗಳು ಮಳೆ ನೀರಿನಿಂದ ಜಲಾವೃತಗೊಂಡಿವೆ.
ಬೆಂಗಳೂರಿನ ಶಾಂತಿನಗರ, ವಿಧಾನಸೌಧ, ನೃಪತುಂಗ ರಸ್ತೆ. ಕೆ,ಆರ್.ಸರ್ಕಲ್, ಕಾರ್ಪೊರೇಷನ್, ಹೆಬ್ಬಾಳ, ಯಲಹಂಕ ಮತ್ತು ಥಣಿಸಂದ್ರ ಭಾಗಗಳಲ್ಲಿ ಜೋರು ಮಳೆಯಾಗ್ತಿದೆ.
ಸಂಜೆ ಕೆಲಸ ಮುಗಿಸಿ ಮನೆಗಳಿಗೆ ಹೋಗುವ ಪ್ರಯಾಣಿಗೆ ಮಳೆ ತೀವ್ರ ತೊಂದರೆ ಕೊಟ್ಟಿದೆ. ಬೆಂಗಳೂರಿನಲ್ಲಿ ಭಾರಿ ಮಳೆಯಾದರೆ ಪ್ರಮುಖವಾಗಿ ತಗ್ಗು ಉಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗ್ತಿದೆ. ಮಳೆಯ ನೀರು ರಸ್ತೆಗಳಲ್ಲೆ ಹರಿಯುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಸಂಜೆ ಯಲಹಂಕ, ಹೆಬ್ಬಾಳ & ಥಣಿಸಂದ್ರ ಸುತ್ತಾಮುತ್ತಾ ತುಂತುರು ಮಳೆಯ ಆರ್ಭಟ ಜೋರಾಗಿದೆ. ಥಣಿಸಂದ್ರದ ಸರ್ಕಲ್ ಬಳಿ ಮಳೆ ನೀರು ರಸ್ತೆಲಿ ಹರಿದು ಜನ ಹೈರಾಣಾಗಿದ್ದಾರೆ.
ಇನ್ನು ಭಾರಿ ಗುಡುಗು ಸಹಿತ ಮಳೆಯಿಂದಾಗಿ ಕೆ.ಆರ್.ಮಾರುಕಟ್ಟೆ ಪ್ರದೇಶದ ಚಿಕ್ಕಪೇಟೆ ಮೆಟ್ರೊ ನಿಲ್ದಾಣ ಸಮೀಪದ ಬಿವಿಕೆ ಅಯ್ಯಂಗಾರ್ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಜನರ ಮೊಣಕಾಲುದ್ದ, ಕೆಲವು ಕಡೆ ಸೊಂಟದವರೆಗೂ ನೀರು ಹರಿದು ಜನ ತೀವ್ರ ತೊಂದರೆ ಅನುಭವಿಸಿದ್ದಾರೆ. ಒಟ್ಟಾರೆ ಬೆಂಗಳೂರಿನ ಜನಜೀವನ ಮಳೆಯಿಂದಾಗಿ ಅಸ್ತವ್ಯಸ್ತವಾಗಿದೆ.
PublicNext
01/05/2022 10:37 pm