ಬೆಂಗಳೂರು: ಈ ಪ್ರಸಿದ್ಧ ಪ್ರವಾಸಿ ತಾಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅದ್ರಲ್ಲೂ ಇತ್ತೀಚಿನ ವರ್ಷಗಳಲ್ಲಿ ನಂದಿ ಬೆಟ್ಟ ಬೆಂಗಳೂರಿಗರ ನೆಚ್ಚಿನ ಟೂರಿಸ್ಟ್ ಸ್ಪಾಟ್. ಆದ್ರೆ, ಕೆಲ ವರ್ಷಗಳಿಂದ ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬೆಟ್ಟದ ಪರಿಸರ ಕೂಡ ಅಭಿವೃದ್ಧಿ ಹೆಸರಿನಲ್ಲಿ ನಾಶವಾಗುತ್ತಿದೆ. ಕಳೆದ ವರ್ಷ ಇಲ್ಲಿ ಭೂ ಕುಸಿತವೂ ಸಂಭವಿಸಿತ್ತು. ಪರಿಸರ ಪ್ರೇಮಿಗಳು ಬೆಟ್ಟ ಉಳಿಸಲು ಹಲವು ಅಭಿಯಾನ ನಡೆಸಿ ಇಲ್ಲಿನ ಸೌಂದರ್ಯ ವರ್ಧನೆಗೆ ನೆರವಾಗುತ್ತಿದ್ದಾರೆ.
ಈ ಮಧ್ಯೆ ಬೆಂಗಳೂರಿನ ಚಿಕ್ಕ ಕುಟುಂಬವೊಂದು ಸದ್ದಿಲ್ಲದೆ ನಂದಿ ಬೆಟ್ಟದ ಉಳಿವಿಗಾಗಿ ಶ್ರಮಿಸುತ್ತಿದೆ. ಹೌದು, ಅಮ್ಮ- ಮಗ ಸೇರಿ ಈ ಸುಂದರ ತಾಣದ ವೈಭವ ಮರುಕಳಿಸಲು ಪಣ ತೊಟ್ಟಿದ್ದಾರೆ. ವಿದ್ಯಾರಣ್ಯಪುರದ ಮಹೇಶ್ ಜೆ.ಎಸ್. ಹಾಗೂ ಅವರ ತಾಯಿ ಅನಸೂಯ ಇಂತಹ ವಿಶೇಷ ಸೇವಾ ಕೈಂಕರ್ಯಕ್ಕೆ ಮುಂದಾಗಿದ್ದಾರೆ.
ಹವ್ಯಾಸಿ ಛಾಯಾಗ್ರಾಹಕ ಮಹೇಶ್ ಕೆಲ ವರ್ಷಗಳಿಂದ ವೀಕೆಂಡ್ ನಲ್ಲಿ ನಂದಿ ಬೆಟ್ಟದಲ್ಲಿ ಹಕ್ಕಿಗಳ ಫೋಟೊಗ್ರಫಿಗೆ ಬರುತ್ತಿದ್ದರು. ಆದ್ರೆ, ಇತ್ತೀಚೆಗೆ ಇಲ್ಲಿ ಪಕ್ಷಿಗಳ ಸಂಖ್ಯೆ ಕ್ಷೀಣಿಸುತ್ತಿರುವುದನ್ನು ಗಮನಿಸಿದ್ದಾರಂತೆ. ಹೀಗಾಗಿ, ಕಳೆದ 3 ವಾರಗಳಿಂದ ಇವರಿಬ್ಬರೂ ನಂದಿ ಬೆಟ್ಟದ ಸುತ್ತಮುತ್ತ ನೂರಾರು ಹಣ್ಣಿನ ಸಸಿಗಳನ್ನು ನೆಟ್ಟಿದ್ದಾರೆ. ಮುಂದೆ ಈ ಸಸಿಗಳೆಲ್ಲ ಹೆಮ್ಮರವಾಗಿ ಹಕ್ಕಿಗಳ ಆವಾಸ ಸ್ಥಾನ ಜತೆಗೆ ಆಹಾರದ ಮೂಲವಾಗಬೇಕು ಎಂಬುದು ಉದ್ದೇಶ.
ಅಮ್ಮ- ಮಗನ ಸಾಮಾಜಿಕ ಕಳಕಳಿ ಕಂಡ ಮಹೇಶ್ ರ ಸ್ನೇಹಿತರು ಕೂಡ ಬೆಂಬಲಕ್ಕೆ ನಿಂತು ಗಿಡ ನೆಡುವ ಕಾಯಕದಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಇವರೊಂದಿಗೆ ಆಶಾ, ಸಂತೋಷ್ ಸೇರಿದಂತೆ ಹಲವರು ʼಬ್ಯೂಟಿಫುಲ್ ಮೈಂಡ್ಸ್ʼ ಎಂಬ ತಂಡ ಕಟ್ಟಿಕೊಂಡು ಮಳೆಗಾಲ ಪ್ರಾರಂಭಕ್ಕೂ ಮುನ್ನ ಎಲ್ಲರೂ ಸೇರಿ ಸಾವಿರ ಗಿಡ ನೆಡುವ ಗುರಿ ಹೊಂದಿದ್ದಾರೆ.
Kshetra Samachara
17/05/2022 08:41 pm