ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಪುನರ್ ಬಳಕೆ ನಿಷೇಧಿಸಲಾಗಿದ್ದು, ಅದರಂತೆ ಮಾರಾಟ ಮಳಿಗೆಗಳು, ಉತ್ಪಾದನೆ ಘಟಕಗಳ ಮೇಲೆ ಅನಿರೀಕ್ಷಿತ ತಪಾಸಣೆ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ಜೊತೆಗೆ ದಂಡ ವಿಧಿಸಲಾಗುತ್ತಿದೆ.
ಈ ಕಾರ್ಯವನ್ನು ಆಯಾ ವಲಯ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರು ವಲಯವಾರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಾಲಿಕೆಯ ಎಂಟೂ ವಲಯ ವ್ಯಾಪ್ತಿಯಲ್ಲಿ ವಲಯ ಮಾರ್ಷಲ್ ಮೇಲ್ವಿಚಾರಕ, ವಿಭಾಗ ಮೇಲ್ವಿಚಾರಕ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕಿರಿಯ ಆರೋಗ್ಯ ನಿರೀಕ್ಷಕ ಹಾಗೂ ಮಾರ್ಷಲ್ ಒಳಗೊಂಡ ತಂಡ ಮಾರಾಟ ಮಳಿಗೆಗೆ ಅನಿರೀಕ್ಷ್ಷಿತ ಭೇಟಿ ನೀಡಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಸುವುದು ಕಂಡುಬಂದರೆ ವಶಪಡಿಸಿ ದಂಡ ವಿಧಿಸುವ ಕೆಲಸ ಮಾಡುತ್ತಿದ್ದಾರೆ.
ಅದರಂತೆ, ನಿನ್ನೆ ದಕ್ಷಿಣ ವಲಯ ಪದ್ಮನಾಭನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಉತ್ಪಾದನೆಯ 2 ಘಟಕಗಳಿಗೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿ, ದಂಡ ವಿಧಿಸಿದ್ದಾರೆ. ಈ ಪೈಕಿ ಪದ್ಮನಾಭನಗರ ವಾರ್ಡ್, ಸುಬ್ರಮಣ್ಯಪುರ ಮುಖ್ಯ ರಸ್ತೆಯಲ್ಲಿರುವ ಅಗ್ರಿ ಎಂಟರ್‌ಪ್ರೈಸಸ್ ಘಟಕದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಕಂಡುಬಂದಿದ್ದು, ಹಳೆ ದಂಡ 5 ಲಕ್ಷ ಹಾಗೂ ಹೊಸದಾಗಿ 1 ಲಕ್ಷ ಸಹಿತ ಒಟ್ಟು 6 ಲಕ್ಷ ರೂ. ದಂಡವನ್ನು ಚೆಕ್ ಮೂಲಕ ಪಡೆದು 200 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ವಶಪಡಿಸಲಾಗಿದೆ.
ಜೊತೆಗೆ ಪದ್ಮನಾಭ ನಗರ ವಾರ್ಡ್, ಗೌಡನಪಾಳ್ಯ ಬಳಿಯಿರುವ ಗ್ರೇಸ್ ಪಾಲಿಮರ್ಸ್ ಘಟಕದಲ್ಲಿಯೂ ನಿಷೇಧಿತ ಪ್ಲಾಸ್ಟಿಕ್ ಬಳಕೆ ಕಂಡು ಬಂದಿದ್ದು. 25 ಸಾವಿರ ದಂಡ ವಿಧಿಸಿ ಚೆಕ್ ಮೂಲಕ ಹಣ ಪಡೆಯಲಾಗಿದೆ.
Kshetra Samachara
22/02/2022 04:50 pm