ಬೆಂಗಳೂರು: ನಗರದಲ್ಲಿ ಗೌರಿ ಗಣೇಶ ಹಬ್ಬದ ಹಿನ್ನೆಲೆ ರಸ್ತೆ ರಸ್ತೆಗಳಲ್ಲಿ ಗಣೇಶ ಮೂರ್ತಿ ಕೂರಿಸಿ ಹಬ್ಬ ಮಾಡೋದು ಸಂಪ್ರದಾಯ. ಪ್ರತಿ ವರ್ಷವೂ ಗಣೇಶ ಕುರಿಸೋಕೆ ಸಂಘಸಂಸ್ಥೆಗಳು, ಗೆಳಯರ ಬಳಗ ಒಂದಷ್ಟು ರೂಲ್ಸ್ ಫಾಲೋ ಮಾಡ್ವೇಕು. ಆದ್ರೆ ಈ ಬಾರಿ ಸರ್ಕಾರ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಒಂದಷ್ಟು ಹೆಚ್ಚಿನ ರೂಲ್ಸ್ ಜಾರಿಗೊಳಿಸಿದೆ. ಈ ಸಂಬಂಧ ಸಂಘ ಸಂಸ್ಥೆಗಳಿಗೆ ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.
ಅದ್ರಲ್ಲಿ ಮುಖ್ಯವಾಗಿ ಗಣೇಶ ಪ್ರತಿಷ್ಠಾಪನೆ ಹಾಗೂ ಕಾರ್ಯಕ್ರಮಗಳ ಆಯೋಜನೆಗೆ ಬಲವಂತವಾಗಿ ಹಣ ಸಂಗ್ರಹಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಮುನ್ನ ಬಿಬಿಎಂಪಿ ಅನುಮತಿ ಪಡೆಯಬೇಕು. ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಪ್ರತಿಷ್ಠಾಪಿಸಬೇಕು.ಚಪ್ಪರ ಹಾಗೂ ಶಾಮಿಯಾನಗಳನ್ನು ಸದೃಢವಾಗಿ ನಿರ್ಮಿಸಬೇಕು. ಈ ಪೆಂಡಾಲ್ ಹೊರುತಪಡಿಸಿ ಬೇರೆ ಜಾಗಗಳಲ್ಲಿ ಬಂಟಿಗ್ಸ್, ಬ್ಯಾನರ್ ಹಾಗೂ ಫ್ಲೆಕ್‌ಗಳನ್ನು ಹಾಕಲು ಬಿಬಿಎಂಪಿಯಿಂದ ಪ್ರತ್ಯೇಕವಾಗಿ ಅನುಮತಿ ಪಡೆಯಬೇಕು.
*ಯಾವುದೇ ಕಾರಣಕ್ಕೂ ವಿವಾದಿತ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಬಾರದು. ಪ್ರತಿಷ್ಠಾಪನೆ ಮುನ್ನ ಸಂಬಂಧಪಟ್ಟ ಜಾಗದ ಮಾಲೀಕರ ಅನುಮತಿ ಪಡೆಯಬೇಕು.
ಪೆಂಡಾಲ್‌ನಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಿಗಾವಹಿಸಲು ಆಯೋಜಕರ ಪರವಾಗಿ ದಿನದ ೨೪ ತಾಸು ಕಾರ್ಯಕರ್ತರು ಕಾವಲಿರಬೇಕು. ಈ ಕಾರ್ಯಕರ್ತರ ಬಗ್ಗೆ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು.ಸರ್ಕಾರ ಹಾಗೂ ಬಿಬಿಎಂಪಿ ಆದೇಶದಂತೆ ಪೆಂಡಾಲ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು.
ಬೆಂಕಿ ನಂದಿಸುವ ಸಾಮಗ್ರಿಗಳಾದ ಅಗ್ನಿ ನಂದಕಗಳು, ಮರಳು ತುಂಬಿರುವ ಬಕೆಟ್ ಹಾಗೂ ನೀರಿನ ವ್ಯವಸ್ಥೆ ಇರಬೇಕು. ಪೆಂಡಾಲ್ ಸುತ್ತಮುತ್ತ ಅಡುಗೆ ಮಾಡುವ ಕಟ್ಟಿಗೆ, ಉರುವಲು, ಸೀಮೆ ಎಣ್ಣೆ ಸಾಧನಗಳನ್ನು ಇಡಬಾರದು. ಅಲ್ಲಿ ಅಡುಗೆ ಸಹ ಮಾಡಬಾರದು.
ಪೆಂಡಾಲ್ ಸ್ಥಳದಲ್ಲಿ ಒಬ್ಬರು ಎಲೆಕ್ಟ್ರಿಷಿಯನ್ ಲಭ್ಯವಿರಬೇಕು. ಸಮರ್ಪಕ ಬೆಳೆಕು ಹಾಗೂ ವಿದ್ಯುತ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಶಾರ್ಟ್ ಸರ್ಕ್ಯೂಟ್ ಇತ್ಯಾದಿ ಅವಘಡಗಳನ್ನು ನಿವಾರಿಸಬೇಕು.ಪೆಂಡಾಲ್‌ಗಳಿಗೆ ಸಾರ್ವಜನಿಕರ ಆಗಮನ ಮತ್ತು ನಿರ್ಗಮನ ವ್ಯವಸ್ಥೆಯನ್ನು ಸೂಕ್ತವಾಗಿ ಕಲ್ಪಿಸಬೇಕು. ಜನಸಂದಣಿ ನಿಯಂತ್ರಿಸಲು ಸ್ವಯಂ ಸೇವಕರನ್ನು ನಿಯೋಜಿಸಬೇಕು. ಅಲ್ಲದೆ ಪೆಂಡಾಲ್‌ಗಳಿಗೆ ಖಾಸಗಿ ಭದ್ರತಾ ವ್ಯವಸ್ಥೆಯನ್ನು ಸಹ ಮಾಡಬೇಕು. ಯಾವುದೇ ರೀತಿ ಜನಜಂಗಳಿಗೆ ಅವಕಾಶ ಕೊಡಬಾರದು. ಪೆಂಡಾಲ್‌ನಲ್ಲಿನ ಎಲ್ಲ ಪರಿಕರಗಳಿಗೆ ಕಾರ್ಯಕ್ರಮ ಆಯೋಜಕರನೇ ಹೊಣೆಗಾರರಾಗಿರುತ್ತಾರೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮೆರವಣಿಗೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸಂಘಟಕರು ಸೂಕ್ತ ಕ್ರಮ ವಹಿಸಬೇಕು. ಗಣೇಶ ಪ್ರತಿಷ್ಠಾನೆ, ಮನರಂಜನಾ ಕಾರ್ಯಕ್ರಮ, ಮೆರವಣಿಗೆ ಹಾಗೂ ವಿಸರ್ಜನಾ ಸ್ಥಳಗಳಲ್ಲಿ ಹೆಣ್ಣು ಮಕ್ಕಳನ್ನು ಚುಯಾಡಿಸುವುದು, ಕೀಟಲೆ ಮಾಡುವುದು ಸೇರಿದಂತೆ ಅಸಭ್ಯ ವರ್ತನೆಗಳನ್ನು ತೋರುವವರ ಬಗ್ಗೆ ಪೊಲೀಸರು ಅಥವಾ ಪೊಲೀಸ್ ನಿಯಂತ್ರಣ ಕೊಠಡಿ 112ಗೆ ಕರೆ ಮಾಡಿ ತಿಳಿಸಬೇಕು.
ನ್ಯಾಯಾಲಯದ ಆದೇಶದಂತೆ ಹಿರಿಯ ನಾಗರಿಕರು, ರೋಗಿಗಳು ಹಾಗೂ ಮಕ್ಕಳಿಗೆ ತೊಂದರೆ ಉಂಟಾಗದಂತೆ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಧ್ವನಿವರ್ಧಕಗಳನ್ನು ಬಳಸಬೇಕು.ಗಣೇಶ ಪ್ರತಿಷ್ಠಾನ ಮಂಡಳಿಯ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಗಳ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಸಂಬಂಧ ಠಾಣಾಧಿಕಾರಿಗಳಿಗೆ ಆಯೋಜಕರು ನೀಡಬೇಕು. ಅಲ್ಲದೆ ಈ ವಿವರಗಳನ್ನು ಪೆಂಡಾಲ್ ಬಳಿ ಎಲ್ಲರಿಗೂ ಕಾಣುವಂತೆ ಹಾಕಬೇಕು.
ಯಾವುದೇ ರೀತಿಯ ಲೇಸರ್ ಪ್ರೊಜೆಕ್ಷನ್ ಮಾಡಬಾರದು. ಮೆರವಣಿಗೆಯು ಸೂಕ್ಷ್ಮ ಸ್ಥಳ, ಅತಿ ಸೂಕ್ಷ್ಮ ಸ್ಥಳ ಹಾಗೂ ಪ್ರಾರ್ಧನಾ ಮಂದಿರಗಳ ಮುಂಭಾಗದಲ್ಲಿ ಸಾಗುವಾಗ ಸಿಡಿಮದ್ದು, ಪಟಾಕಿಗಳನ್ನು ಸಿಡಿಸಬಾರದು.ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಆಯೋಜಕರು ಸ್ವಯಂ ಸೇವಕರನ್ನು ಗುರುತಿಸಲು ಅವರಿಗೆ ಗುರುತಿನ ಚೀಟಿ, ಬ್ಯಾಡ್ಜ್, ಟೀ-ಶರ್ಟ್ ಅಥವಾ ಟೋಪಿಗಳನ್ನು ನೀಡಬೇಕು. ಮೆರವಣಿಗೆ ಶಾಂತರೀತಿಯಲ್ಲಿ ಸಾಗಲು ಸ್ವಯಂಸೇವಕರು ಶ್ರಮಿಸಬೇಕು.
ಪೆಂಡಾಲ್‌ನಲ್ಲಿ ಸಾಂಸ್ಕೃತಿ ಕಾರ್ಯಕ್ರಮಗಳ ಆಯೋಜನೆ ಮುನ್ನ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಬಂದೋಸ್ತ್ ಕೆಲಸಗಳಿಗೆ ಪೊಲೀಸರಿಗೆ ಆಯೋಜಕರು ಸಹಕರಿಸಬೇಕು. ಧ್ವನಿವರ್ಧಕಗಳಿಗೆ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.ಗಣೇಶ ವಿಸರ್ಜನೆ ಸಂಬಂಧ ಮೆರವಣಿಗೆಯು ನಿಗದಿತ ಸಮಯದಲ್ಲಿ ಮುಗಿಯುವಂತೆ ಸಂಘಟಕರು ಗಮನಹರಿಸಬೇಕು. ಮೆರವಣಿಗೆಗೆ ಸುರಕ್ಷತೆ ಸಹ ಮುನ್ನೆಚ್ಚರಿಕೆ ವಹಿಸಬೇಕು.
ಜೊತೆಗೆ ಗೌರಿ-ಗಣೇಶ ಹಬ್ಬವನ್ನು ನಾಡಿನ ಸಂಸ್ಕೃತಿ, ಭಾವೈಕ್ಯತೆಯ ಪ್ರತೀಕವಾಗಿ ಆಚರಿಸಲಾಗುತ್ತಿದ್ದು,ಕೋಮು ಸೌಹಾರ್ದದಿಂದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿ ಎಂದು ಸಾರ್ವಜನಿಕರಲ್ಲಿ ಸಿ.ಎಚ್.ಪ್ರತಾಪ್ ರೆಡ್ಡಿ ಮನವಿ ಮಾಡಿದ್ದಾರೆ.
Kshetra Samachara
28/08/2022 01:06 pm