ಬೆಂಗಳೂರು: ಬಹು ನಿರೀಕ್ಷಿತ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಇನ್ನೂ 49 ಆಸ್ತಿಗಳ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದೆ. 38 ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಿದ್ದು, 11 ಸರ್ಕಾರಿ ಆಸ್ತಿಗಳ ಹಸ್ತಾಂತರ ಆಗಬೇಕಿದೆ.
ಸಿವಿಲ್ ಕಾಮಗಾರಿ ಗುತ್ತಿಗೆಯನ್ನು ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ (ಎನ್‌ಸಿಸಿ) ಪಡೆದುಕೊಂಡಿದೆ. 2 ಬಿ ಮಾರ್ಗದ ಕಾಮಗಾರಿಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದ್ದು, ಎಲ್ಲ ಪ್ಯಾಕೇಜ್‌ಗಳನ್ನೂ ಎನ್‌ಸಿಸಿಗೆ ನೀಡಲಾಗಿದೆ. ಕಾಮಗಾರಿ ಸಂಬಂಧ ಮಾಡಿಕೊಂಡಿರುವ ಒಪ್ಪಂದ ಪತ್ರವನ್ನು ಬಿಎಂಆರ್‌ಸಿಎಲ್ ಎನ್‌ಸಿಸಿಗೆ ಹಸ್ತಾಂತರಿಸಿದೆ.
ಕೆ.ಆರ್. ಪುರದಿಂದ ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣದವರೆಗೆ 38.44 ಕಿ. ಮೀ. ಉದ್ದದ ಎತ್ತರಿಸಿದ ಮೆಟ್ರೋ ರೈಲು ಮಾರ್ಗದ ಕಾಮಗಾರಿಗೆ ಒಟ್ಟು 2,200 ಕೋಟಿ ರೂ. ನಿಗದಿ ಪಡಿಸಲಾಗಿದೆ. ಈ ಮಾರ್ಗದಲ್ಲಿ ಸರ್ಕಾರದ 60 ಆಸ್ತಿಗಳು ಹಾಗೂ ಖಾಸಗಿಯವರ 214 ಆಸ್ತಿಗಳು ಸೇರಿ ಒಟ್ಟು 274 ಆಸ್ತಿಗಳು ಸೇರಿ ಒಟ್ಟು 2.22 ಲಕ್ಷ ಚದರ ಮೀಟರ್ ಭೂಮಿ ಸ್ವಾಧೀನ ಆಗಬೇಕಿತ್ತು. ಈ ಪೈಕಿ ಸದ್ಯ ಇನ್ನೂ 49 ಆಸ್ತಿಗಳ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದೆ.
ಶೆಟ್ಟಿಗೆರೆಯಲ್ಲಿ ಡಿಪೊಗೆ ಅಗತ್ಯ ಇರುವ 23 ಎಕರೆಯಲ್ಲಿ 18 ಎಕರೆ ಹಸ್ತಾಂತರವಾಗಿದ್ದು, 5 ಎಕರೆ ಜಾಗದ ವಿಷಯದಲ್ಲಿ ವ್ಯಾಜ್ಯ ಇರುವುದರಿಂದ ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿಯಿಂದ ಆದೇಶ ಬಾಕಿ ಇದೆ ಎಂದೂ ಬಿಎಂಆರ್‌ಸಿಎಲ್ ಅಧಿಕಾರಿಗಳು ವಿವರಿಸಿದ್ದಾರೆ.
ಸಿವಿಲ್ ಕಾಮಗಾರಿಯ ಪ್ರಗತಿ
ಮಾರ್ಗ: ಕಾಮಗಾರಿ ಪ್ರಗತಿ (ಶೇಕಡವಾರು)
ರೀಚ್–1ಎ (ಬೈಯಪ್ಪನಹಳ್ಳಿಯಿಂದ ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶ); 96
ರೀಚ್–1ಬಿ (ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶದಿಂದ ವೈಟ್‌ಫೀಲ್ಡ್); 99
ರೀಚ್–2ಎ (ಮೈಸೂರು ರಸ್ತೆಯಿಂದ ಪಟ್ಟಣಗೆರೆ); 100
ರೀಚ್–2ಬಿ (ಪಟ್ಟಣಗೆರೆಯಿಂದ ಚಲ್ಲಘಟ್ಟ ಡಿಪೊ); 99
ರೀಚ್ –3ಸಿ (ಹೆಸರಘಟ್ಟ ಕ್ರಾಸ್‌ನಿಂದ ಬಿಐಇಸಿ); 75
ರೀಚ್– 5ಪಿ3 (ಬೊಮ್ಮನಹಳ್ಳಿಯಿಂದ ಆರ್.ವಿ. ರಸ್ತೆ); 76
ರೀಚ್ –6 (ಕಾಳೇನ ಅಗ್ರಹಾರದಿಂದ ಸ್ವಾಗತ್ ಕ್ರಾಸ್ ರಸ್ತೆ); 30
Kshetra Samachara
24/01/2022 09:40 am