ಬೆಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣದ ಕಾಮಗಾರಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಂಪೇಗೌಡರು ಬೆಂಗಳೂರಿನ ನಿರ್ಮಾತೃವಾಗಿದ್ದು, ಅವರಿಗೆ ಸಂಬಂಧಿಸಿದ ಪರಂಪರೆಯನ್ನು ಸಂರಕ್ಷಿಸಲು ಸರ್ಕಾರ ತೀರ್ಮಾನಿಸಿದೆ. ಇದರಂತೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ 23 ಎಕರೆ ವಿಸ್ತಾರದ ಹೆರಿಟೇಜ್ ಪಾರ್ಕ್ ಅಸ್ತಿತ್ವಕ್ಕೆ ಬರುತ್ತಿದೆ ಎಂದರು.
ಕೆಂಪೇಗೌಡರ ಪ್ರತಿಮೆ ಮತ್ತು ಪಾರಂಪರಿಕ ಉದ್ಯಾನ ನಿರ್ಮಾಣಕ್ಕೆ 2020ರಲ್ಲೇ ಅಡಿಗಲ್ಲು ಹಾಕಲಾಗಿದೆ. ಕೊರೊನಾ ಸಾಂಕ್ರಾಮಿಕದ ಕಾರಣಕ್ಕಾಗಿ ಪ್ರತಿಮೆ ನಿರ್ಮಾಣ ತಡವಾಗಿದೆ. ಗುಜರಾತಿನ `ಏಕತಾ ಪ್ರತಿಮೆ’ ಮತ್ತು ಬೆಂಗಳೂರಿನಲ್ಲಿ ಮಹಾತ್ಮ ಗಾಂಧಿಯ ಪ್ರತಿಮೆಯನ್ನು ನಿರ್ಮಿಸಿರುವ ಪದ್ಮಭೂಷಣ ಪುರಸ್ಕೃತ ಶಿಲ್ಪಿಗಳಾದ ರಾಮ್ ವಾನಜಿ ಸುತರ್ ಅವರು ದೆಹಲಿ ಸಮೀಪದ ನೋಯಿಡಾದಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸುತ್ತಿದ್ದಾರೆ. ಇದಕ್ಕಾಗಿ 85 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕೆಂಪೇಗೌಡರ ಕಾಲುಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಸೊಂಟದ ಭಾಗ ಇನ್ನಷ್ಟೇ ಅಳವಡಿಸಬೇಕಾಗಿದೆ ಎಂದು ಅವರು ಹೇಳಿದರು.
ಕೆಂಪೇಗೌಡರ ಸಮಾಧಿ ಸ್ಥಳವು ಮಾಗಡಿ ತಾಲೂಕಿನಲ್ಲಿದ್ದು, ಅದನ್ನು ಕೂಡ ಸಂರಕ್ಷಿಸಲಾಗುತ್ತಿದೆ. ಕೆಂಪೇಗೌಡರಿಂದಾಗಿ ಬೆಂಗಳೂರಿಗೆ ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಬಂದಿದೆ ಎಂದರು.
ಈ ಸಂದರ್ಭದಲ್ಲಿ ಅವರು ಕಾಮಗಾರಿ ನಡೆಸುತ್ತಿರುವ ಸಿಬ್ಬಂದಿ ವರ್ಗದಿಂದ ಅಗತ್ಯ ಮಾಹಿತಿ ಪಡೆದುಕೊಂಡು, ಕೆಲಸವನ್ನು ತ್ವರಿತಗೊಳಿಸುವಂತೆ ಸೂಚಿಸಿದರು.
Kshetra Samachara
19/12/2021 10:54 am