ಬೆಂಗಳೂರು: ಎಸ್ಸಿ ಎಸ್ ಟಿ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರು ಪೂರ್ವ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಆರು ಜಾತಿಗಳಿದ್ದಾಗ 15 % ಮೀಸಲಾತಿ ನೀಡಲಾಗಿತ್ತು. ಇದೀಗ 150 ಜಾತಿಗಳು ಇವೆ ಅದಕ್ಕಾಗಿ ಮೀಸಲಾತಿ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಮುಖಂಡ ಮಂಜುನಾಥ, ಮಾತನಾಡಿ ಎಸ್‌ಸಿ ಎಸ್‌ಟಿ ಮೀಸಲಾತಿ ಹೆಚ್ಚಿಗೆ ಮಾಡಲು 184 ತಾಲ್ಲೂಕಿನಲ್ಲಿ ಏಕಕಾಲಕ್ಕೆ ಪ್ರತಿಭಟನೆ ಮಾಡಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ ಎಂದರು. ಮೀಸಲಾತಿ ಹೆಚ್ಚಿಗೆ ಮಾಡದಿದ್ದರೆ ಬೆಂಗಳೂರಿಗೆ ದಿಗ್ಬಂಧನ ಹೋರಾಟ ಮಾಡಿ ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದರು.
ದಲಿತ ಸ್ವಾಮೀಜಿಗಳು ಕಳೆದ ನೂರು ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮಾಡುತ್ತಿದ್ದರೂ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಾಯಕ ಸಂಘದ ಪೂರ್ವತಾಲ್ಲೂಕು ಅಧ್ಯಕ್ಷ ಗಣೇಶ್ ಮಾತನಾಡಿ ಎಸ್‌ಟಿ ಸಮುದಾಯಕ್ಕೆ ಮೂರರಿಂದ 7ರಷ್ಟು ಮೀಸಲಾತಿ ಹೆಚ್ಚಿಸಬೇಕು ದಲಿತ ಸಂಘಟನೆಗಳೆಲ್ಲ ಒಟ್ಟಾಗಿ ಮಾಡುತ್ತಿರುವ ಹೋರಾಟ ಇದು ಎಂದು ಹೇಳಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ ಅಜಿತ್ ರೈ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
PublicNext
20/05/2022 06:56 pm