ಬೆಂಗಳೂರು: ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಬೆಂಗಳೂರಿನಾದ್ಯಂತ ಪ್ರವಾಹ ಉಂಟಾಗಿದೆ. ಬೆಳ್ಳಂದೂರಿನ ಯಮಲೂರು ಗ್ರಾಮದೇವತೆಯ ದೇವಸ್ಥಾನ ಈ ಬಾರಿಯ ಮಳೆಗೆ ಮುಳುಗಿ ಹೋಗಿದೆ. ನೂರಾರು ವರ್ಷಗಳ ಇತಿಹಾಸವಿರುವ ದೇವಸ್ಥಾನ ಇದಾಗಿದ್ದು, ಯಮಲೂರು ಗ್ರಾಮದೇವತೆಯಾದ ದುಗ್ಲಮ್ಮ ದೇವಸ್ಥಾನ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿ ಗ್ರಾಮಸ್ಥರು ಪೂಜೆ ಕೂಡ ಮಾಡದಂತೆ ಆಗಿದೆ. ಬೆಳ್ಳಂದೂರು ಕೆರೆ ಅಂಚಿನಲ್ಲಿರುವ ಈ ದೇವಸ್ಥಾನ ಇಲ್ಲಿಯವರೆಗೂ ಯಾವತ್ತೂ ಯಾವುದೇ ಮಳೆಗೂ ಜಲಾವೃತಗೊಂಡಿರಲಿಲ್ಲ. ಆದರೆ ಈ ಬಾರಿ ಮಳೆಗೆ ಸಂಪೂರ್ಣ ದೇವಸ್ಥಾನ ಜಲದಿಗ್ಬಂಧನಕ್ಕೆ ಒಳಗಾಗಿದೆ.
ಇಷ್ಟೆಲ್ಲಾ ಆದ್ರೂ ಇದುವರೆಗೂ ಸ್ಥಳೀಯ ಶಾಸಕರಾದ ಅರವಿಂದ ಲಿಂಬಾವಳಿ ಇತ್ತ ಕಡೆ ಬಂದಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ಶಾಸಕರ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಖಾಸಗಿ ಕಂಪನಿಗಳು ಮತ್ತು ಖಾಸಗಿ ಅಪಾರ್ಟ್ ಮೆಂಟ್ ಗಳು ರಾಜಕಾಲುವೆ ಒತ್ತುವರಿ ಮಾಡಿರುವ ಕಾರಣ ಮಳೆ ಬಂದಾಗ ಮಳೆ ನೀರು ಸುಲಭವಾಗಿ ಹೋಗಲು ಆಗದೆ ದೇವಸ್ಥಾನದ ಸುತ್ತ ನೀರು ತುಂಬಿ ಜಲಾವೃತಗೊಂಡಿದೆ ಎಂದು ಸ್ಥಳೀಯರು ಆರೋಪ ಮಾಡಿದರು.
ಇನ್ನಾದ್ರೂ ಶಾಸಕರು ಎಚ್ಚೆತ್ತುಕೊಂಡು ಯಮಲೂರಿಗೆ ಭೇಟಿ ನೀಡಿ ಜನರಿಗೆ ಆಗಿರುವ ಕಷ್ಟ ನೋವನ್ನು ಕೇಳಬೇಕೆಂದು ಯಮಲೂರು ಜನರು ಶಾಸಕರಿಗೆ ಮನವಿ ಮಾಡುತ್ತಿದ್ದಾರೆ.
ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.
PublicNext
07/09/2022 07:23 pm