ರಿಪೋರ್ಟ್- ರಂಜಿತಾಸುನಿಲ್..
ಬೆಂಗಳೂರು: ಶಾಲಾ ಮಕ್ಕಳಿಗೆ ಪಠ್ಯ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಗಳೂ ಅಷ್ಟೇ ಮುಖ್ಯ ಎಂದು ಹೆಸರಾಂತ ವನ್ಯಜೀವಿ ಛಾಯಾಗ್ರಾಹಕ ಸಂಜಯ್ ಗುಬ್ಬಿ ಅವರು ಇಲ್ಲಿ ಇಂದು ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ವನ್ಯಜೀವಿ ಛಾಯಾಗ್ರಾಹಕ ಅಮೋಘ ವರ್ಷ ಅವರ ಐದು ದಿನಗಳ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದ್ದಾರೆ.
ಶಾಲೆಯಲ್ಲಿ ಗಣಿತ, ವಿಜ್ಞಾನದಷ್ಟೇ ಭಾಷಾ ಕಲಿಕೆಯೂ ಮುಖ್ಯ. ಶಾಲೆಯಲ್ಲಿ ಕಲಿಯುವಷ್ಟೇ ಶಾಲೆಯ ಹೊರಗೆ ಕಲಿಯಲು ಅವಕಾಶಗಳಿವೆ. ಸದಾ ಆನ್ ಲೈನ್ ಆಟಗಳಲ್ಲಿ ತೊಡಗುವ ಬದಲು ಸಿರಿ ಸೊಬಗಿನ ಪಕೃತಿ, ಸಂಪದ್ಭರಿತ ನಿಸರ್ಗ ಹಾಗೂ ಆಕರ್ಷಕ ವನ್ಯಜೀವಿಗಳ ಸುಂದರ ಪರಿಸರದಲ್ಲಿ ಪ್ರೀತಿ ಬೆಳೆಸಿಕೊಂಡು ಸತ್ಪ್ರೆಜೆಗಳಾಗಬೇಕಿದೆ ಎಂದು ತಿಳಿಸಿದರು.
ಚಿಕ್ಕ ವಯಸ್ಸಿನಲ್ಲಿಯೇ ಛಾಯಾಗ್ರಾಹಕ ಅಮೋಘ ವರ್ಷ ಅವರ ಸಾಧನೆ ಅಮೋಘವಾದುದು. ಇತರೆ ಮಕ್ಕಳಿಗೆ ಪ್ರೇರಣೆ ಹಾಗೂ ಸ್ಪೂರ್ತಿದಾಯಕವಾಗಿದೆ. ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಮಾತನಾಡಿ, ವನ್ಯಜೀವಿ ಛಾಯಾಗ್ರಹಣ ಸುಲಭವಲ್ಲ. ವನ್ಯಜೀವಿ ಛಾಯಾಗ್ರಾಹಕನಿಗೆ ಅತೀ ಹೆಚ್ಚು ತಾಳ್ಮೆಯೂ ಇರಬೇಕಾಗುತ್ತದೆ. ಅಪಾಯವನ್ನು ಎದುರಿಸುವ ಉಪಾಯವೂ ತಿಳಿದಿರಬೇಕಾಗುತ್ತದೆ ಎಂದು ಹೇಳಿ, ಅಮೋಘ ವರ್ಷ ಅವರ ಕಲಾ ಕೌಶಲದಲ್ಲಿನ ಪ್ರೌಢಿಮೆ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸುತ್ತದೆ ಎಂದು ಬಣ್ಣಿಸಿದರು.
ಇನ್ನೂ ಚಿತ್ರ ಸಂತೆಯಲ್ಲಿ ಜೂನ್ 5 ರ ವರೆಗೆ ಪ್ರತಿದಿನ ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 6-30 ಗಂಟೆಯವರೆಗೆ ಈ ಛಾಯಾಚಿತ್ರ ಪ್ರದರ್ಶನ ಸಾರ್ವಜನಿಕರಿಗೆ ತೆರೆದಿರುತ್ತದೆ.
Kshetra Samachara
01/06/2022 11:06 pm