ದೊಡ್ಡಬಳ್ಳಾಪುರ: ನಗರ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ವಿಷಕಾರಿ ತ್ಯಾಜ್ಯ ನೀರು ದೊಡ್ಡತುಮಕೂರು ಕೆರೆ ಸೇರಿ ವಿಷವಾಗಿದೆ. ವಿಷಕಾರಿ ನೀರಿನಿಂದ ಸ್ವಾತಂತ್ರ್ಯ ನೀಡುವಂತೆ ಒತ್ತಾಯಿಸಿ ಕೆರೆಯಲ್ಲೆ ವಿಷ ಅಳಿಸಿ ಕೆರೆ ಉಳಿಸಿ ಸಂದೇಶದ ತೆಪ್ಪ ಬಿಡುವ ಮೂಲಕ 76ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಿದರು.
ದೊಡ್ಡಬಳ್ಳಾಪುರ ತಾಲೂಕಿನ ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಚಿಕ್ಕತುಮಕೂರು, ದೊಡ್ಡತುಮಕೂರು ಮತ್ತು ವೀರಾಪುರ ಕೆರೆಗಳ ನೀರು ವಿಷಕಾರಿಯಾಗಿದೆ. ದೊಡ್ಡಬಳ್ಳಾಪುರ ನಗರದ ತ್ಯಾಜ್ಯ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ನೀರು ಶುದ್ದಿಕರಣವಾಗದೆ. ನೇರವಾಗಿ ಕೆರೆಗೆ ಸೇರಿದ ಪರಿಣಾಮ ಕೆರೆಯ ನೀರು ಬಳಸಲು ಸಹ ಯೋಗ್ಯವಾಗಿಲ್ಲ. ಕೆರೆಯ ನೀರು ಕುಡಿದು ಜಾನುವಾರುಗಳು ಸಾವನ್ನಪ್ಪಿವೆ. ದೊಡ್ಡತುಮಕೂರು ವ್ಯಾಪ್ತಿಯಲ್ಲಿ 16 ಬೋರ್‌ವೇಲ್‌ಗಳ ನೀರನ್ನ ಪರೀಕ್ಷಿಸಿದ್ದಾಗ 7 ಬೋರ್ ವೇಲ್‌ಗಳ ನೀರು ವಿಷಕಾರಿಯಾಗಿದೆ ಎಂದು ಲ್ಯಾಬ್ ವರದಿ ಸಹ ಬಂದಿದೆ, ತ್ಯಾಜ್ಯ ನೀರನ್ನು ಶುದ್ದಿಕರಣ ಮಾಡಿ ಬೀಡುವಂತೆ ಒತ್ತಾಯಿಸಿ ಕಳೆದ 9 ತಿಂಗಳಿಂದ ಕೆರೆ ಸಂರಕ್ಷಣಾ ವೇದಿಕೆಯಿಂದ ಹೋರಾಟ ಮಾಡಲಾಗುತ್ತಿದ್ದು, ಆದರೆ ಜಿಲ್ಲಾಡಳಿತದಿಂದ ಯಾವುದೇ ಭರವಸೆ ಸಿಗದ ಹಿನ್ನಲೆ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನ ದೊಡ್ಡತುಮಕೂರು ಕೆರೆಯಲ್ಲಿ ವಿಭಿನ್ನವಾಗಿ ಆಚರಿಸಲಾಯಿತು.
ಪರಿಶುದ್ದವಾದ ನೀರು ಕುಡಿಯುವುದಕ್ಕೂ ನಮಗೆ ಸ್ವಾತಂತ್ರ್ಯವನ್ನ ಜಿಲ್ಲಾಡಳಿತ ನೀಡಿಲ್ಲ. ದೊಡ್ಡಬಳ್ಳಾಪುರ ನಗರ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ವಿಷಕಾರಿ ನೀರಿನಿಂದ ಸ್ವಾತಂತ್ರ್ಯವನ್ನ ನಮ್ಮೂರಿನ ಜನಕ್ಕೆ ನೀಡಿ ಎಂದು ವಿಭಿನ್ನವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲಾಯಿತು. ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗಿದ್ದು, ಈಗಲಾದ್ರೂ ಜಿಲ್ಲಾಡಳಿತ ಎಚ್ಚೆತ್ತುಗೊಂಡು ಶುದ್ಧಿಕರಣ ಘಟಕವನ್ನ ಸ್ಧಾಪನೆ ಮಾಡದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.
ನಮಗೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದೆ ಆದರೆ ನಾವು ಸೇವಿಸುವ ಗಾಳಿ, ನೀರು, ಆಹಾರಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ, ಕೈಗಾರೀಕರಣ ಮತ್ತು ನಗರೀಕರಣ ಪರಿಶುದ್ದ ನೀರಿನ ಸ್ವಾತಂತ್ರ್ಯವನ್ನು ರೈತರಿಂದ ಕಿತ್ತುಕೊಂಡಿದೆ. ಹೀಗಿರುವಾಗ ನಮಗೆ ನಿಜವಾದ ಸ್ವಾತಂತ್ರ್ಯ ಬಂದಿದೆಯಾ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ.
PublicNext
15/08/2022 07:51 pm