ವರದಿ- ಗಣೇಶ್ ಹೆಗಡೆ
ಬೆಂಗಳೂರು- ರಾಜಧಾನಿ ಬೆಂಗಳೂರಿನಲ್ಲಿ ಸುಗಮ ಸಂಚಾರ ಉದ್ದೇಶದಿಂದ ಪ್ರಾರಂಭವಾದ ವೈಟ್ ಟಾಪಿಂಗ್ ಕಾಮಗಾರಿ ಅಂತೂ ಇಂತೂ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.
ನಗರದ ಹೃದಯಭಾಗ, ವಾಣಿಜ್ಯ ಪ್ರದೇಶ, ಸಂಚಾರ ಒತ್ತಡದ ಮಾರ್ಗಗಳಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ ಮುಂದಿನ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, 90 ಕಿ.ಮೀ.ಸಂಚಾರಕ್ಕೆ ಪೂರ್ಣ ಪ್ರಮಾಣದಲ್ಲಿ ತೆರೆದುಕೊಳ್ಳಲಿದೆ.ಇದರಿಂದಾಗಿ ಎರಡು ವರ್ಷಗಳಿಂದ ಕಾಮಗಾರಿ ಕಿರಿಕಿರಿಯಿಂದ ತೊಂದರೆಗೊಳಗಾಗಿದ್ದ ವಾಹನ ಸವಾರರು ಹಾಗೂ ಸಾರ್ವ ಜನಿಕರು ನಿಟ್ಟುಸಿರು ಬಿಡುವಂತಾಗಲಿದೆ.
ಈಗಾಗಲೇ ನಗರಾದ್ಯಂತದ ಪ್ರಮುಖ ರಸ್ತೆಗಳಲ್ಲಿ ಕೈಗೊಂಡಿರುವ ವೈಟ್ ಟಾಪಿಂಗ್ ಕಾಮಗಾರಿ ಶೇ.80 ಸಂಪೂರ್ಣಗೊಂಡಿದೆ.
ಒಟ್ಟಾರೆ, 90ಕಿ.ಮೀ. ಉದ್ದದ ರಸ್ತೆಯಲ್ಲಿ 81 ಕಿ.ಮೀ ಉದ್ದದ ರಸ್ತೆಗಳ ಕಾಮಗಾರಿ ಸಂಪೂರ್ಣಗೊಂಡಿದ್ದು, 9 ಕಿ.ಮೀ.ನಡೆಯ ಬೇಕಿದೆ. ಗಾಂಧಿ ಬಜಾರ , ಕನಕನಪಾಳ್ಯ, ಮೈಸೂರು ರಸ್ತೆಯಿಂದ ವಿಶ್ವವಿದ್ಯಾಲಯ ಒಳಗಡೆ ಪ್ರವೇಶ ಗುಡ್ ಶೆಡ್ ರೋಡ್, ಮಿಷನ್ ರೋಡ್ ನಲ್ಲಿ ಕಾಮಗಾರಿ ಆರಂಭವಾಗಬೇಕಿದೆ.
ವೈಟ್ ಟಾಪಿಂಗ್ ಕಾಮಗಾರಿಯಿಂದಾಗಿ ಮುಂದಿನ 20-30 ವರ್ಷಗಳ ಕಾಲ ರಸ್ತೆಗಳು ಯಾವುದೇ ಸಮಸ್ಯೆ ಇಲ್ಲದೆ ನಿರ್ವಹಣೆಯಾಗಲಿದ್ದು,ಪದೇ ಪದೇ ಅಥವಾ ಪ್ರತಿ ವರ್ಷ ಕಾಮಗಾರಿ, ದುರಸ್ತಿಯ ಪ್ರಮೇಯವೇ ಇರುವುದಿಲ್ಲ.
2018ರಲ್ಲಿ ವೈಟ್ ಟಾಪಿಂಗ್ ಯೋಜನೆ ಯನ್ನು ಕೈಗೆತ್ತಿಕೊಳ್ಳಲಾಗಿತ್ತಾದರೂ ಕೊರೊನಾ ಲಾಕ್ ಡೌನ್, ಕಾರ್ಮಿಕರ ಅಭಾವದಿಂದಾಗಿ ಒಂದಷ್ಟು ದಿನ ಕಾಮಗಾರಿಗೆ ಅಡ್ಡಿಯಾಗಿತ್ತು. ಮುಖ್ಯಮಂತ್ರಿಯವರ ನಗರೋತ್ಥಾನದಡಿ ಲಭ್ಯವಿದ್ದ ಅನುದಾನವನ್ನೂ ವೈಟ್ ಟಾಪಿಂಗ್ ಯೋಜನೆಗೆ ಬಳಸಲಾಗಿದ್ದು, ಇತ್ತೀಚಿಗೆ ಕಾಮಗಾರಿ ಚುರುಕುಗೊಂಡಿದೆ. ಹೀಗಾಗಿ, 2022ರ ಅಗಷ್ಟ್ ಅಂತ್ಯಕ್ಕೆ ಮುಕ್ತಾಯವಾಗುವ ಸಂಭವ ಇದೆ
PublicNext
02/06/2022 06:43 pm