ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಏರ್ ಪೋರ್ಟ್ ಗೆ ಹೊಂದಿಕೊಂಡಿರುವ ಬೆಟ್ಟಕೋಟೆ ಕೆರೆಗೆ ದೊಡ್ಡ ಪ್ರಮಾಣದಲ್ಲಿ ಮಳೆನೀರು ಹರಿದು ಬಂದಿದೆ. ಪರಿಣಾಮ ರಾಜಕಾಲುವೆ ಸೂಕ್ತ ನಿರ್ವಹಣೆ ಇಲ್ಲದೆ ಕೆರೆ ಕೋಡಿ ನೀರು ಕೃಷಿ ಹಾಗೂ ತೋಟಗಾರಿಕೆಯ ನೂರಾರು ಎಕರೆ ಜಮೀನುಗಳಿಗೆ ಹರಿದು ಬೆಳೆಯೆಲ್ಲ ನಾಶವಾಗಿದೆ.
ಇನ್ನು, ನಲ್ಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಲಿ ಮನೆಗಳಿಗೆ ನೀರು ನುಗ್ಗಿ, ದವಸ ಧಾನ್ಯ ನಾಶವಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ನಲ್ಲೂರು ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
2021ರ ನವೆಂಬರ್ ನಲ್ಲಿ ಮಳೆಗೆ ಕೆರೆ ತುಂಬಿತ್ತು. ಈಗ ಮಳೆಗೆ ಬೆಟ್ಟಕೋಟೆ ಕೆರೆ ಕೋಡಿ ಹರಿದಿದೆ. ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಕೆರೆ ನೀರು ಸುತ್ತಮುತ್ತಲ ಬೆಟ್ಟಕೋಟೆ, ನಲ್ಲೂರು ಗ್ರಾಮ ಪಂಚಾಯ್ತಿಗಳ ಅನೇಕ ಹಳ್ಳಿಗಳ ಕೃಷಿ ಜಮೀನು ಜಲಾವೃತವಾಗಿ ರೈತರು ಕಂಗಾಲಾಗಿದ್ದಾರೆ.
ಕೆರೆ ಕೋಡಿ ನೀರು ಬೆಳೆಗಳಿಗೆ, ಮನೆಗಳಿಗೆ ನುಗ್ಗಿ ದೊಡ್ಡ ಪ್ರಮಾಣದ ಆಸ್ತಿಪಾಸ್ತಿ ನಾಶವಾಗಿದೆ. ರೇಷ್ಮೆ ಸೇರಿದಂತೆ ವಿವಿಧ ಬೆಳೆ ನೀರು ಪಾಲಾಗಿದೆ. ಜಿಲ್ಲಾ ಪಂಚಾಯ್ತಿ ಮತ್ತು ಸಣ್ಣ ನೀರಾವರಿ ಇಲಾಖೆಯ ನಿರ್ವಹಣೆ ಕೊರತೆಯಿಂದ ಇಷ್ಟೆಲ್ಲ ಅವಾಂತರವಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುರೇಶ್ ಬಾಬು ʼಪಬ್ಲಿಕ್ ನೆಕ್ಸ್ಟ್ʼ ದೇವನಹಳ್ಳಿ
PublicNext
22/06/2022 03:21 pm