ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸಂಪರ್ಕ ಜಾಲ ಇನ್ನಷ್ಟು ವಿಸ್ತಾರಗೊಳ್ಳುವ ಕಾಲ ಸನ್ನಿಹಿತವಾಗಿದೆ. ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್ ಹಾಗೂ ಕೆಂಗೇರಿ-ಚಲ್ಲಘಟ್ಟ ಮಾರ್ಗದಲ್ಲಿ ಸೆಪ್ಟೆಂಬರ್‌ನಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ.
ಸೀತಾರಾಮಪಾಳ್ಯ (ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶ) ಮತ್ತು ವೈಟ್‌ಫೀಲ್ಡ್ ನಡುವಿನ ಸಿವಿಲ್ ಕಾಮಗಾರಿ ಶೇ.99.6ರಷ್ಟು ಮುಕ್ತಾಯಗೊಂಡಿದೆ ಎಂದು ಬಿಎಮ್‌ಆರ್‌ಸಿಎಲ್ ಅಂಕಿ-ಅಂಶ ತಿಳಿಸಿವೆ. ಬೈಯಪ್ಪನಹಳ್ಳಿ -ಸೀತಾರಾಮಯ್ಯ ಪಾಳ್ಯ ನಡುವೆ ಶೇ.94.6ರಷ್ಟು ಕಾಮಗಾರಿ ಮುಗಿದಿದೆ. ಆದರೆ, ವೈಟ್‌ಫೀಲ್ಡ್ ಮೆಟ್ರೋ ಸಂಪರ್ಕಕ್ಕೆ ಅಗತ್ಯವಿರುವ ಕಾಡುಗೋಡಿ ಡಿಪೋದಲ್ಲಿ ಇದುವರೆಗೆ .36ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಮೈಸೂರು ರಸ್ತೆಯ ಕೆಂಗೇರಿ-ಚಲ್ಲಘಟ್ಟ ವಿಭಾಗದಲ್ಲಿ ಶೇ.98.6ರಷ್ಟು ಕಾಮಗಾರಿ ಮುಗಿದಿದೆ.
ವೈಟ್‌ಫೀಲ್ಡ್ ಮತ್ತು ಕೆ.ಆರ್. ಪುರ ನಡುವೆ ಹಳಿ ಹಾಕುವ ಕೆಲಸ ಶೇ.75ರಷ್ಟು ಪೂರ್ಣಗೊಂಡಿದೆ. ಹಳಿ ಕಾಮಗಾರಿ ಜತೆಗೆ ಕಾಡುಗೋಡಿ ಡಿಪೋ ಕೆಲಸ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಹಳಿ ಅಳವಡಿಕೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ವಿಭಾಗದಿಂದ ಹೆಚ್ಚುವರಿ ತಂಡ ನಿಯೋಜಿಸಲಾಗಿದೆ ಎಂದು ಬಿಎಮ್‌ಆರ್‌ಸಿಎಲ್ (ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿ.) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದರು.
ವೈಟ್‌ಫೀಲ್ಡ್ ಮೆಟ್ರೋ ಮಾರ್ಗ ನಿಲ್ದಾಣ: ಬೆನ್ನಿಗಾನಹಳ್ಳಿ (ಜ್ಯೋತಿಪುರ/ಟಿನ್ ಫ್ಯಾಕ್ಟರಿ), ಕೆ.ಆರ್.ಪುರ, ಮಹದೇವಪುರ, ಗರುಡಾಚಾರ್‌ಪಾಳ್ಯ, ಹೂಡಿ ಜಂಕ್ಷನ್, ಸೀತಾರಾಮಪಾಳ್ಯ, ಕುಂದಲಹಳ್ಳಿ, ನಲ್ಲೂರಹಳ್ಳಿ, ಸದರಮಂಗಲ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ, ಚನ್ನಸಂದ್ರ ಮತ್ತು ವೈಟ್‌ಫೀಲ್ಡ್.
PublicNext
21/06/2022 08:46 pm