ಬೆಂಗಳೂರು: ಹೀಗೆ... ರಾತ್ರಿ ಹೊತ್ತಲ್ಲೂ ಒಬ್ಬಂಟಿಯಾಗಿ ಟೀ ಮಾರುತ್ತಿರುವ ಮಹಿಳೆಯನ್ನ ಒಮ್ಮೆ ನೋಡಿ. ಯಾವ ಮಹಿಳೆಯೂ ಓಡಾಡದ ಮಧ್ಯರಾತ್ರಿ ವೇಳೆನೇ ಚಹಾ ವ್ಯಾಪಾರ ಮಾಡುತ್ತಿರುವ ಈಕೆ ಹೆಸರು ಸರಿತಾ. ಈ ನಾರಿಯ ಬದುಕಿನ ಕಥೆ ಕೇಳಿದರೆ ನಿಮಗೂ ನೋವುಂಟಾಗುವುದು ಖಂಡಿತಾ.
ಮೂಲತಃ ಕೋಲಾರ ಜಿಲ್ಲೆಯ ಸರಿತಾ ಇದೀಗ ಕೆಆರ್ ಪುರಂ ಮಾರ್ಕೆಟ್ ರಸ್ತೆ ಬಳಿ ರಾತ್ರಿ 11ರಿಂದ ಮುಂಜಾನೆ 6 ಗಂಟೆವರೆಗೆ ಟೀ ಮಾರುತ್ತಾಳೆ. ಅಲ್ಲದೆ, ಬೆಳಿಗ್ಗೆ ಹೋಟೆಲ್ ನಲ್ಲಿ ಸಪ್ಲೈಯರ್ ಕೆಲ್ಸ ಕೂಡ ಮಾಡುತ್ತಾಳೆ! ಬಡಕುಟುಂಬದಲ್ಲಿ ಬೆಳೆದ ಈಕೆಯ ತಂದೆ ರೈತರಾಗಿದ್ದರು. ಶಾಲಾ ದಿನಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, ಉನ್ನತ ಸ್ಥಾನಕ್ಕೇರಲು ಆಸೆ ಪಟ್ಟಿದ್ದಳು.
ಆದರೆ, ದ್ವಿತೀಯ ಪಿಯುಸಿ ಓದುತ್ತಿದ್ದ ವೇಳೆ ತಂದೆ ಮೃತಪಡುತ್ತಾರೆ.
ಹೀಗಾಗಿ ಕುಟುಂಬಸ್ಥರ ಒತ್ತಾಯಕ್ಕೆ ಮಣಿದು ಮದುವೆಯಾಗಬೇಕಾಯಿತು. ಪತಿ ಕಾರ್ಪೆಂಟರ್ ಆಗಿದ್ರೂ ಕುಟುಂಬ, ಆರ್ಥಿಕತೆಯಲ್ಲಿ ಸರಿತಾ ಮೇಲೆಯೇ ಅವಲಂಬಿತ. ತಾನಂತೂ ಓದಿ ಮುಂದೆ ಬರಲು ಸಾಧ್ಯವಾಗಿಲ್ಲ ಎಂಬ ಕೊರಗು ಸರಿತಾಗೆ ಈಗಲೂ ಇದೆ. ಹೀಗಾಗಿ, ತನ್ನಿಬ್ಬರು ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಪಣ ತೊಟ್ಟು ಹಗಲಿರುಳು ಶ್ರಮಿಸುತ್ತಿರುವ ಸರಿತಾ, ಇದೀಗ ಸಹಾಯದ ನಿರೀಕ್ಷೆಯಲ್ಲಿದ್ದಾಳೆ.
ಸರಿರಾತ್ರಿ ಹೊತ್ತು ರಸ್ತೆಯಲ್ಲಿ ನಿಂತು ಸರಿತಾ ಟೀ ಮಾರುವುದನ್ನ ಗಮನಿಸಿದ ಸ್ಥಳೀಯರು, ಶೀಘ್ರ ಸರ್ಕಾರದ ನೆರವಿನಿಂದ ಟೀ ಮಾರಲು ಪುಟ್ಟ ಅಂಗಡಿ ನಿರ್ಮಿಸಿ ಕೊಟ್ಟರೆ ಈಕೆ ಒಳ್ಳೆಯ ಜೀವನ ನಡೆಸಬಹುದು ಎನ್ನುತ್ತಾರೆ.
ಒಟ್ಟಿನಲ್ಲಿ, ಈ ದಿಟ್ಟ ಮಹಿಳೆಗೆ ಸಹಾಯದ ಅಗತ್ಯವಿದೆ. ಜನಪ್ರತಿನಿಧಿಗಳು ದೊಡ್ಡ ಮನಸ್ಸು ಮಾಡಿ ಸರಿತಾಳ ಬದುಕಿನಲ್ಲಿ ಹೊಸ ಬೆಳಕು ಮೂಡಿಸಲಿ ಎಂಬುದೇ ನಮ್ಮ ಆಶಯ.
ನವೀನ್, ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
15/03/2022 09:29 pm