ಬೆಂಗಳೂರು: ಬಾಲಕನ ದೇಶಭಕ್ತಿಗೆ ಹೇಳಿ ಸಲಾಂ…ನಮ್ಮ ದೇಶದಲ್ಲಿ ಸೈನಿಕರೆಂದರೆ ಹೆಮ್ಮೆ ಅವರನ್ನು ಕಂಡೊಡನೇ ಕೈ ತಾನಾಗಿಯೇ ಸೆಲ್ಯೂಟ್ ಹೇಳಿ ಬಿಡತ್ತೆ.
ಈ ಪ್ರೀತಿ, ಗೌರವ ದೇಶದ ಪ್ರತಿಯೊಬ್ಬರಲ್ಲಿಯೂ ನಾವು ಕಾಣಬಹುದು. ಇದನ್ನು ಯಾರು ಯಾರಿಗೂ ಹೇಳಿಕೊಡಬೇಕಾಗಿಲ್ಲ. ಅದೇ ರೀತಿ ಇಲ್ಲೊಬ್ಬ ಬಾಲಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇನಾ ವಾಹನದಲ್ಲಿ ಆಗಮಿಸಿದ ಸಿಬ್ಬಂದಿಗೆ ಸೆಲ್ಯೂಟ್ ಮಾಡಿದ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗಿದೆ.
ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ ಅವರು ಕೂಡ ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ದೇಶಭಕ್ತಿಯನ್ನು ಈ ಬಾಲಕನಿಂದ ಕಲಿಯಬೇಕು ಎಂದು ಬರೆದಿದ್ದಾರೆ.
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಸೇನಾ ವಾಹನದ ಬಳಿ ಬರುವ ಈ ಬಾಲಕ ವಾಹನದ ಮುಂದೆ ನಿಂತು ಅದರಲ್ಲಿದ್ದ ಸಿಬ್ಬಂದಿಗೆ ಸೆಲ್ಯೂಟ್ ಮಾಡಿದ್ದಾನೆ. ಸೇನಾ ಸಿಬ್ಬಂದಿ ಕೂಡ ಬಾಲಕನಿಗೆ ಪ್ರತಿವಂದನೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಪ್ರತಿಯೊಬ್ಬ ದೇಶವಾಸಿಗಳ ದೇಶಭಕ್ತಿಯನ್ನು ಜಾಗೃತಗೊಳಿಸುತ್ತದೆ.
ಸದ್ಯ ಮುಗ್ದ ಮಗುವಿನ ದೇಶಪ್ರೇಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
Kshetra Samachara
25/10/2021 12:49 pm