ವರದಿ- ಗಣೇಶ್ ಹೆಗಡೆ
ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಇದುವರೆಗೆ 331 ಪ್ರಕರಣಗಳು ಪತ್ತೆಯಾಗಿದ್ದು, ಡೆಂಘಿ ಪ್ರಕರಣಗಳು ಹೆಚ್ಚಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಅಧಿಕಾರಿಗಳಿಗೆ ಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದರು.
ನಗರದಲ್ಲಿ ಡೆಂಘಿ ಪ್ರಕರಣಗಳನ್ನು ತಡೆಗಟ್ಟುವ ಸಂಬಂಧ ನಡೆದ ವರ್ಚುವಲ್ ಸಭೆಯಲ್ಲಿ ಅಧಿಕಾರಿಗಳಿಗೆ ಬಿಬಿಎಂಪಿ ಚೀಫ್ ಕಮಿಷನರ್ ಸೂಚನೆ ನೀಡಿದರು.
ಪಾಲಿಕೆಯ ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಎ.ಎನ್.ಎಂ ಹಾಗೂ ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡಿ ಸೊಳ್ಳೆ ಉತ್ಪತ್ತಿ ಆಗುವ ತಾಣಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಲಾರ್ವಾ ಉತ್ಪತ್ತಿಯಾಗುವ ತಾಣಗಳನ್ನು ಗುರುತಿಸುವ ಕೆಲಸ ಮಾಡುತ್ತಾರೆ. ಆ ಬಳಿಕ ಸೊಳ್ಳೆ ಉತ್ಪತ್ತಿ ತಾಣಗಳನ್ನು ಗ್ಯಾಂಗ್ ಮ್ಯಾನ್ ಗಳು ಸ್ಥಳಕ್ಕೆ ಭೇಟಿ ನೀಡಿ ನಾಶಪಡಿಸುತ್ತಾರೆಂದು ಮುಖ್ಯ ಆರೋಗ್ಯಾಧಿಕಾರಿ ಆಯುಕ್ತರಿಗೆ ಮಾಹಿತಿ ನೀಡಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಬೇಕಾದ ಎಲ್ಲಾ ಔಷಧಗಳು ಹಾಗೂ ಖಾಯಿಲೆಗೆ ಚಿಕಿತ್ಸೆ ನೀಡಲು ಬೇಕಾಗುವ ಅಗತ್ಯ ಔಷಧಗಳು ಲಭ್ಯವಿರಬೇಕು. ರಸ್ತೆ ಬದಿ ಮಾರಾಟ ಮಾಡುವ ಎಳನೀರು ಅಂಗಡಿಯವರಿಗೆ ತೆಂಗಿನ ಚಿಪ್ಪುಗಳನ್ನು ಕೂಡಲೆ ತೆರವು ಮಾಡಲು ಸೂಚನೆ ನೀಡಬೇಕು ಎಂದು ತಿಳಿಸಿದರು.
ಜಲಮಂಡಳಿ ಇಲಾಖೆಯು ಕುಡಿಯುವ ನೀರು ಸಂಗ್ರಹಿಸುವ ಸ್ಥಳದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕುಡಿಯುವ ನೀರು ಹರಿಯುವ ಪೈಪ್ ಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು.
ಕುಡಿಯುವ ನೀರು ಸಂಪರ್ಕಕ್ಕಾಗಿ ರಸ್ತೆ ಬದಿಯಲ್ಲಿ ಇರಿಸಿರುವ ಪೈಪ್ ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಎಲ್ಲೆಲ್ಲಿ ನೀರು ನಿಂತಿದೆ ಎಂಬುದನ್ನು ಪರಿಶೀಲಿಸಿ ಅದನ್ನು ಸ್ವಚ್ಛ ಮಾಡಬೇಕೆಂದು ಮುಖ್ಯ ಆಯುಕ್ತರು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿ ದರು.
ಇದಾದ ಬಳಿಕ ಪಾಲಿಕೆ ಗಾಜಿನ ಮನೆಯಲ್ಲಿ ರಾಷ್ಟ್ರೀಯ ಡೆಂಘಿ ದಿನಾಚರಣೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಂದೀಪ್ ಚಾಲನೆ ನೀಡಿದರು.
Kshetra Samachara
16/05/2022 06:23 pm