ಬೆಂಗಳೂರು: ಪೌರಕಾರ್ಮಿಕರ ದಿನಾಚಾರಣೆ ಹಿನ್ನಲೆ ಇವತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರೇಸ್ ಕೋರ್ಸ್ ರಸ್ತೆ ನಿವಾಸದಲ್ಲಿ ಸಡಗರದ ವಾತಾವರಣ ಮನೆ ಮಾಡಿತ್ತು. ಮೊನ್ನೆಯಷ್ಟೇ ತಮ್ಮ ಸೇವೆ ಕಾಯಂಗೊಂಡ ಸಿಹಿ ಸುದ್ದಿ ಪಡೆದಿದ್ದ ಪೌರ ಕಾರ್ಮಿಕ ಮಹಿಳೆಯರಿಗೆ ಇಂದು ಮುಖ್ಯಮಂತ್ರಿ ಯವರೊಂದಿಗೆ ಬೆಳಗ್ಗಿನ ಉಪಾಹಾರ ಸವಿಯುವ ಅವಕಾಶ. ಇದ ಅವರಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿತ್ತು ಎದುರು. ನೋಡುತ್ತಿದ್ದ ವ್ಯಕ್ತಿ ಬರುತ್ತಿದ್ದಂತೆ ಅವರನ್ನು ಸುತ್ತುವರಿದು, ಶಾಲು, ಹಾರ, ಫಲ ತಾಂಬೂಲ ಅರ್ಪಿಸಿದವರ ನೋಟದಲ್ಲಿ ಕೃತಜ್ಞತೆಯ ಭಾವ ಮನೆ ಮಾಡಿತ್ತು.
ಅವರ ಕುಶಲೋಪರಿ ವಿಚಾರಿಸಿದ ಮುಖ್ಯಮಂತ್ರಿಗಳು ನಿಮ್ಮ ಆರೋಗ್ಯ, ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಸರ್ಕಾರ ಕಾಳಜಿ ವಹಿಸಲಿದೆ ಎಂದು ಭರವಸೆ ತುಂಬಿದರು. ಜೊತೆಗೆ ನಿಮ್ಮ ಮನೆ ಗಂಡು ಮಕ್ಕಳ ಬಗ್ಗೆ ನಿಗಾ ವಹಿಸಿ ಎಂದು ಕಿವಿಮಾತು ಹೇಳಲು ಮರೆಯಲಿಲ್ಲ.
ನಂತರ ಪೌರ ಕಾರ್ಮಿಕರಿಗೆ ತಿಂಡಿ ಬಡಿಸಿದ ಮುಖ್ಯಮಂತ್ರಿಯವರು ತಮ್ಮ ಪಕ್ಕ ಕುಳಿತ ಭಾರತಿ ಅವರೊಂದಿಗೆ ಮಾತಿಗಿಳಿದರು. ಅವರ ವೇತನ ಸರಿಯಾಗಿ ಆಗುತ್ತಿದೆಯೇ, ಕೆಲಸದ ಸ್ಥಳದಲ್ಲಿ ಸೂಕ್ತ ಸೌಲಭ್ಯಗಳು ದೊರೆಯುತ್ತಿವೆಯೇ.ಹೀಗೆ ಹಲವು ವಿಷಯಗಳ ಕುರಿತು ಮಾಹಿತಿ ಪಡೆದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಪೌರ ಕಾರ್ಮಿಕರಿಗೆ ಆತ್ಮವಿಶ್ವಾಸ ಹಾಗೂ ಆತ್ಮ ಗೌರವ ಮೂಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಕೋಟ ಶ್ರೀನಿವಾಸ ಪೂಜಾರಿ, ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
23/09/2022 08:49 pm