ವರದಿ- ಗಣೇಶ್ ಹೆಗಡೆ
ಬೆಂಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಚುನಾ ವಣಾ ಆಯೋಗ ಬಿಬಿಎಂಪಿ ಚುನಾ ವಣೆ ಪ್ರಕ್ರಿಯೆಯನ್ನು ಆರಂಭಿಸಿದೆ. ಇಂದಿನಿಂದ ಮನೆ ಮನೆಗೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಈ ಪ್ರಕ್ರಿಯೆ ಒಂದುವರೆ ತಿಂಗಳೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಅಕ್ಟೋಬರ್–ನವೆಂಬರ್‌ನಲ್ಲಿ ಚುನಾವಣೆ ನಡೆಯುವ ಸಂಭವ ಇದೆ.
ಮತದಾರರ ಪಟ್ಟಿ ಅಂತಿಮವಾಗದ ಹೊರತು ಚುನಾವಣೆ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ. ಹೀಗಾಗಿ ಚುನಾವಣೆ ಆಯೋಗ ಸಮಯ ವ್ಯರ್ಥ ಮಾಡದೆ ಚುನಾವಣೆ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದೆ. ವಾರ್ಡ್‌ವಾರು ಮತದಾರರ ಪಟ್ಟಿ ಅಂತಿಮಗೊಂಡ ನಂತರ, ಚುನಾವಣೆ ಅಧಿಸೂಚನೆ ಹೊರಬೀಳಲಿದೆ.
ಮತದಾರರ ಭಾವಚಿತ್ರ ಇರುವ ಮತದಾರರ ಪಟ್ಟಿಯನ್ನು ಪ್ರಕಟಿಸಲು ರಾಜ್ಯ ಚುನಾವಣಾ ಆಯೋಗ ಸೂಚಿಸಿದೆ. ಸೆಪ್ಟೆಂಬರ್ 22ರಂದು ವಾರ್ಡ್‌ವಾರು ಮತದಾರರ ಪಟ್ಟಿಯನ್ನು ಅಂತಿಮವಾಗಿ ಪ್ರಕಟಿಸಬೇಕು ಎಂದು ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಬಿಎಂಪಿ ಆಡಳಿತ ವಿಶೇಷ ಆಯುಕ್ತ, ದಕ್ಷಿಣ ಹಾಗೂ ಮಹದೇವಪುರ ವಲಯದ ಜಂಟಿ ಆಯುಕ್ತರನ್ನು ಜಿಲ್ಲಾ ಚುನಾವಣಾಧಿಕಾರಿಯಾಗಿದ್ದಾರೆ. ಇವರೆಲ್ಲರ ನೇತೃತ್ವದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದೆ.
PublicNext
01/08/2022 10:49 am