ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಆಗ್ತಿದೆ ಅಂದ್ರೆ ಸರ್ಕಾರಕ್ಕೆ ಟೆನ್ಷನ್ ಶುರುವಾಗುತ್ತೆ. ನಗರದೆಲ್ಲೆಡೆ ಚೆಲ್ಲಾಪಿಲ್ಲಿಯಾಗಿ ನಡೀತಿದ್ದ ಪ್ರತಿಭಟನೆಯನ್ನು ತಂದು ಸರ್ಕಾರ ಫ್ರೀಡಂ ಪಾರ್ಕ್ ನಲ್ಲಿ ಹಾಕಿತ್ತು. ಇದು ಈಗ ಮತ್ತೊಂದು ಬಹುದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಹೇಗೆ ಅಂತೀರಾ..? ಈ ಸ್ಟೋರಿ ನೋಡಿ.
ನಗರದ ಫ್ರೀಡಂ ಪಾರ್ಕ್ ಪ್ರತಿಭಟನೆಗಳ ಅಡ್ಡೆ. ಯಾವುದೇ ಪ್ರತಿಭಟನೆಗಳಿದ್ದರೂ ಅದನ್ನು ಫ್ರೀಡಂ ಪಾರ್ಕ್ ನಲ್ಲೇ ಮಾಡಬೇಕು. ಅದರ ಹೊರತಾಗಿ ಎಲ್ಲಿಯೂ ಪೊಲೀಸರು ಪ್ರತಿಭಟನೆಗೆ ಅನುಮತಿ ನೀಡುವ ಹಾಗಿಲ್ಲ. ಹೀಗಾಗಿ ತಿಂಗಳಿಗೆ ಸರಾಸರಿ 15 ರಿಂದ 20 ಪ್ರತಿಭಟನೆಗಳು ನಡೆಯುತ್ತದೆ ಇಲ್ಲಿ. ಇದೀಗ ಸಾಲು ಸಾಲು ಪ್ರತಿಭಟನೆಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೊಳ್ಳಿ ಇಡುತ್ತಿದೆ. ಎಗ್ಗಿಲ್ಲದೆ ನಡೆಯುವ ಪ್ರತಿಭಟನೆಗಳಿಂದ ಅಕ್ಕಪಕ್ಕದಲ್ಲೇ ಇರುವ ಕಾಲೇಜಿನ ವಿದ್ಯಾರ್ಥಿಗಳಿಗೆ ಸೂಕ್ತವಾಗಿ ತರಗತಿಗಳು ನಡೆಯುತ್ತಿಲ್ಲ.
ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಪ್ರತಿಭಟನೆ ಮಾಡಬಾರದು, ಫ್ರೀಡಂ ಪಾರ್ಕಿನಲ್ಲಿ ಮಾತ್ರ ಅವಕಾಶ ಕೊಡಬೇಕು ಎಂದು ಹೈಕೋರ್ಟ್ ಆದೇಶವಿದೆ. ಆದ್ರೆ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಪ್ರತಿಭಟನೆ, ಮೆರವಣಿಗೆ ವಿರುದ್ಧ ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತ ಮಂಡಳಿ ಆಕ್ಷೇಪವನ್ನ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಗಳಿಂದ ದೊಡ್ಡ ಪ್ರಮಾಣದಲ್ಲಿ ಶಬ್ಧವಾಗುತ್ತಿದ್ದು ಕಾಲೇಜು ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪಾಠ ಕೇಳೋದಕ್ಕೆ ಆಗುತ್ತಿಲ್ಲ ಅನ್ನೋ ಆರೋಪವನ್ನು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಆಕ್ಷೇಪ ವ್ಯಕ್ತಪಡಿಸಿದೆ.
ಒಟ್ಟಾರೆ ಪ್ರತಿಭಟಿಸೋದು, ನ್ಯಾಯ ಕೇಳೋದು ಒಂದು ಕಡೆಯಾದ್ರೆ, ದಯವಿಟ್ಟು ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡಬೇಡಿ ಅನ್ನೋ ವಿದ್ಯಾರ್ಥಿಗಳು ಇನ್ನೊಂದು ಕಡೆ. ಹೀಗಾಗಿ ಸರ್ಕಾರ ಪ್ರತಿಭಟನೆ ಸ್ಥಳವನ್ನ ಸ್ಥಳಾಂತರ ಮಾಡುತ್ತಾ? ಅಥವಾ ಮೈಕ್, ಸ್ಪೀಕರ್ ರಹಿತ ಪ್ರತಿಭಟನೆಗೆ ಅವಕಾಶ ಮಾಡಿಕೊಡುತ್ತಾ ಗೊತ್ತಿಲ್ಲ. ಆದರೆ ಅಂತಿಮವಾಗಿ ಈ ಪ್ರಕರಣ ಏನಾಗುತ್ತೆ ಎಂಬುವುದನ್ನು ಕಾದುನೋಡಬೇಕಿದೆ.
ಗಣೇಶ್ ಹೆಗಡೆ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
23/07/2022 03:26 pm