ಬೆಂಗಳೂರು: ನೆಲಮಂಗಲ ತಾಲ್ಲೂಕಿನ ಸೊಂಪುರ ಹೋಬಳಿಯ ಸುಮಾರು 100 ಎಕರೆ ವಿಸ್ತೀರ್ಣ ಹೊಂದಿರುವ ನಿಡವಂದ ಕೆರೆ ಕೋಡಿ ಬಿದ್ದಿದೆ. ಈ ಹಿನ್ನೆಲೆ ಶಾಸಕ ಶ್ರೀನಿವಾಸಮೂರ್ತಿ ಸೇರಿದಂತೆ ಹಲವಾರು ಸ್ಥಳೀಯ ಮುಖಂಡರುಗಳು ಕೆರೆಗೆ ಬಾಗಿನ ಅರ್ಪಿಸಿದರು.
ಸುಮಾರು 100ಎಕರೆ ವಿಸ್ತೀರ್ಣ ಹೊಂದಿದ ನಿಡವಂದ ಕೆರೆ 30ವರ್ಷಗಳ ಬಳಿಕ ಕೊಡಿ ಬಿದ್ದಿದ್ದು ಗ್ರಾಮಸ್ಥರೆಲ್ಲರು ಸೇರಿ ಶಾಸಕರು ಭಾಗಿಯಾಗಿ ಗ್ರಾಮದ ಬಸವಣ್ಣ ದೇವರ ಮೆರವಣಿಗೆಯ ಮೂಲಕ ಕೆರೆಗೆ ಬಾಗಿನ ಅರ್ಪಿಸಿದರು.
ಇನ್ನು ಈ ವೇಳೆ ಮಾತನಾಡಿದ ಶಾಸಕ ಶ್ರೀನಿವಾಸ ಮೂರ್ತಿ ಗ್ರಾಮದ ಒಳಿತಿಗಾಗಿ ನಮ್ಮ ಕಡೆಯಿಂದ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದೇವೆ. ಜೊತೆಗೆ ಸ್ಥಳೀಯ ಕಾರ್ಖಾನೆಗಳು ಸಹ ಗ್ರಾಮದ ಅಭಿವೃದ್ಧಿಗೆ ಸಾಥ್ ನೀಡಿವೆ. ಇಂದು 30ವರ್ಷದ ಬಳಿಕ ಗ್ರಾಮದ ಕೆರೆ ತುಂಬಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ ಎಂದರು. ಇನ್ನು ಡಾಬಾಸ್ ಪೇಟೆಯ ಶಿವಗಂಗಾ ವೃತ್ತದಲ್ಲಿ ರಸ್ತೆ ಕೆರೆಯಂತಾಗಿರುವ ವಿಚಾರಕ್ಕೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಇದರ ವಿಚಾರವಾಗಿ ಅಧಿಕಾರಿ ವರ್ಗದ ಜೊತೆ ಈಗಾಗಲೇ ಮಾತನಾಡಿದ್ದು ನಾಳೆ ನಮ್ಮ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ಸಹ ಆಗಮಿಸುತ್ತಿದ್ದಾರೆ ಅವರ ಬಳಿಯೂ ಸಹ ಕೇಶಿಫ್ ರಸ್ತೆ ವಿಚಾರವಾಗಿ ಚರ್ಚಿಸಿ ಶೀಘ್ರ ಪರಿಹಾರಕ್ಕೆ ಮುಂದಾಗುತ್ತೇವೆ ಎಂದರು.
Kshetra Samachara
07/09/2022 11:44 am