ಬೆಂಗಳೂರು: ಆನ್ ಲೈನ್ ನಲ್ಲಿ ಅಪರಿಚಿತರನ್ನ ನಂಬುವ ಮುನ್ನ ಜೋಕೆ. ಆನ್ ಲೈನ್ ನಲ್ಲಿ ಚಾಟಿಂಗ್ ನಂತರ ಡೇಟಿಂಗ್ ವಂಚಿಸುತ್ತಾರೆ ವಂಚಕರು. ಅನ್ ಲೈನ್ ನಲ್ಲಿ ಪರಿಚಯ ಆಗಿ ಮದುವೆಯಾಗ್ತೇನೆ ಅಂತ ನಂಬಿಸಿ ವಂಚಕನೊಬ್ಬ ಯುವತಿಯಿಂದ ಹಣ ಪಡೆದು ಪಂಗನಾಮ ಹಾಕಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಇತ್ತೀಚೆಗೆ ಜನ ಆನ್ ಲೈನ್ ಅನ್ನು ಜೀವನದ ಒಂದು ಭಾಗವಾಗಿಸಿಕೊಂಡಿದ್ದಾರೆ.
ಇದರಲ್ಲಿ ಚೆಂದುಳ್ಳಿ ಚೆಲುವೆಗೆ ಆನ್ ಲೈನ್ ನಲ್ಲಿ ಪರಿಚಯವಾದ ಪ್ರಶೋಭ್ ಎಂಬಾತ ಏನೂ ಗೊತ್ತಿಲ್ಲಾ ಎಂಬಂತೆ ನಟಿಸಿ ಮದುವೆ ಆಸೆಯಲ್ಲಿದ್ದ ಯುವತಿಯನ್ನ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯ ಮಾಡ್ಕೊಂಡಿದ್ದ. ಒಂದು ವರ್ಷದ ಹಿಂದೆ ಪ್ರಶೋಭ್ ಗೆ ಪರಿಚಯವಾಗಿದ್ದ ಯುವತಿಯನ್ನು ಮೊದಲಿಗೆ ಚಿನ್ನ-ರನ್ನ ಎಂದು ಚಾಟಿಂಗ್ ಮಾಡಿ ಡೇಟಿಂಗ್ ತನಕ ತಂದು ನಿಲ್ಲಿಸಿದ್ದ. ಕ್ರಮೇಣ ಮದುವೆಯಾಗುತ್ತೇನೆ ಎಂದಿದ್ದ ಪ್ರಶೋಭ್, ಯುವತಿಯ ಬಳಿ ನಾನಾ ಕಾರಣ ಹೇಳಿ ಸಾಕಷ್ಟು ಹಣ ಪಡೆದಿದ್ದ.
ಹೀಗೆ ಪಡೆದ ಹಣ ಬರೋಬ್ಬರಿ 65 ಲಕ್ಷ ರೂಪಾಯಿ.ಇವರ ಪ್ರೀತಿ ಒಂದು ವರ್ಷ ಕಳೆಯುತ್ತಿದ್ದಂತೆ ಯುವತಿಯಿಂದ ಪ್ರಶೋಭ್ ನುಣುಚಿಕೊಳ್ಳುವ ಯತ್ನ ಮಾಡಿದ್ದ. ಸದ್ದಿಲ್ಲದೇ ಯುವತಿಗೆ ಕೈಕೊಟ್ಟು ಎಸ್ಕೇಪ್ ಆಗಿದ್ದ. ಇದರಿಂದ ಗಾಬರಿಗೊಂಡಿದ್ದ ಯುವತಿ ಪ್ರಶೋಭ್ ಮನವೊಲಿಸಿ ಮದುವೆಯಾಗುವ ಯತ್ನಕ್ಕೆ ಕೈ ಹಾಕಿದ್ಲು.
ಅಷ್ಟರಲ್ಲಿ ಯುವತಿಗೆ ಪ್ರಿಯಕರನ ರಂಗಿನಾಟ ಅರ್ಥವಾಗಿತ್ತು. ಪ್ರಾಣ ಕೊಡ್ತೀನಿ ಅಂದವನು ಮತ್ತೊಬ್ಬ ಹೆಣ್ಣಿಗೆ ಹೃದಯಕೊಟ್ಟು ಮನದರಸಿ ಮಾಡಿಕೊಂಡಿದ್ದ. ಇದರಿಂದ ರೊಚ್ಚಿಗೆದ್ದ ಯುವತಿ ನನ್ನ ಹಣ ಕೊಡು ಇಲ್ಲಾ ಮದುವೆಯಾಗು ಎಂದು ಪಟ್ಟು ಹಿಡಿದಿದ್ದಳು. ಆದರೆ ಪ್ರಶೋಭ ಒಪ್ಪದೇ ಯುವತಿಗೆ ಧಮ್ಕಿ ಹಾಕಿದ್ದ.
ಯವಕನ ವರ್ತನೆಗೆ ಬೇಸತ್ತ ಯುವತಿ ಹಣವೂ ಇಲ್ಲದೇ, ಇತ್ತ ಮದುವೆಯೂ ಇಲ್ಲದೇ ನೊಂದು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಯುವತಿಯ ಗೋಳಾಟ ಕಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಿರಾತಕ ಪ್ರಶೋಭ್ ನನ್ನು ಅರೆಸ್ಟ್ ಮಾಡಿ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಿದ್ದಾರೆ.
PublicNext
31/07/2022 06:53 pm