ಬೆಂಗಳೂರು: ಟೆಕ್ನಾಲಜಿ ಬಳಸಿಕೊಂಡು ಕಾರುಗಳನ್ನು ಕದಿಯುತ್ತಿದ್ದ ಆರೋಪಿಯನ್ನು ಹೆಚ್ಎಸ್ಆರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಅರುಣ್ ಕುಮಾರ್ ಅಲಿಯಾಸ್ ಶಿವನ್ ಬಂಧಿತ ಆರೋಪಿ. ಆರೋಪಿಯಿಂದ 70 ಲಕ್ಷ ಮೌಲ್ಯದ 10 ಕಾರು, 1 ಬೈಕ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದಿದ್ದ ಆರೋಪಿ, ಮೆಕಾನಿಕ್ ಕೆಲಸ ಮಾಡುತ್ತಾ ಟೆಕ್ನಾಲಜಿ ಬಳಸಿಕೊಂಡು ಕಾರುಗಳನ್ನು ಕಳ್ಳತನ ಮಾಡಲು ತೀರ್ಮಾನಿಸಿದ್ದನು.
ಆರೋಪಿ ಅರುಣ್ ಕುಮಾರ್ ವಿರುದ್ಧ ಬೆಂಗಳೂರಿನಲ್ಲಿ 11 ಪ್ರಕರಣಗಳು ದಾಖಲಾಗಿದ್ದು, ಈತ ಬೆಂಗಳೂರು ದಕ್ಷಿಣದ ಮೈಕೋ ಲೇಔಟ್ ಪೊಲೀಸ್ ಠಾಣೆ, ಕೋಣನಕುಂಟೆ, ಬಾನಸವಾಡಿ, ಬೇಗೂರು, ಬೆಳ್ಳಂದೂರು ಮತ್ತು ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಾರು ಕಳ್ಳತನ ಮಾಡಿದ್ದ.
ಅರುಣ್ ಕುಮಾರ್ ಕಾರು ಕಳ್ಳತನ ಮಾಡಿ ತಮಿಳುನಾಡಿಗೆ ಕಾರುಗಳನ್ನು ತೆಗೆದುಕೊಂಡು ಹೋಗಿ ನಕಲಿ ದಾಖಲೆ ಸೃಷ್ಟಿಸಿ ಮಾರುತ್ತಿದ್ದ. ಕಾರು ಮಾರಿದ ಹಣದಲ್ಲಿ ಸ್ನೇಹಿತರೊಂದಿಗೆ ಸೇರಿ ಕುಡಿದು ಮೋಜು ಮಸ್ತಿ ಮಾಡುತ್ತಿದ್ದ.
ಆರೋಪಿ ಅರುಣ್ ಕೊಲೆ ಮತ್ತು ರಾಬರಿ ಮಾಡಿ ಜೈಲು ಕೂಡ ಸೇರಿದ್ದ. ಆಗಲೇ ನೋಡಿ ಈತ ಆಂಧ್ರಪ್ರದೇಶದ ಮದನಪಲ್ಲಿ ಜೈಲಿನಲ್ಲಿ ರಾಜೇಶ್ ಎನ್ನುವ ಕೈದಿಯ ಜೊತೆ ಸ್ನೇಹಿತನಾಗಿ ಆತ ನೀಡಿದ ಐಡಿಯಾ ಉಪಯೋಗಿಸಿ ಜೈಲಿನಿಂದ ಹೊರಬಂದು ಕಾರುಗಳ ಕಳ್ಳತನ ಮಾಡುತ್ತಿದ್ದ. ಇದೀಗ ಮತ್ತೆ ಜೈಲು ಸೇರಿದ್ದಾನೆ.
-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
12/07/2022 10:09 am