ನೆಲಮಂಗಲ: ಆ ಗ್ರಾಮದಲ್ಲಿ ಜಂಟಿ ಖಾತೆ ಜಮೀನೊಂದರಲ್ಲಿ ರಸ್ತೆ ವಿಚಾರವಾಗಿ ಇಂದು ನ್ಯಾಯ ಪಂಚಾಯ್ತಿ ನಡೀತಾ ಇತ್ತು. ಮಾತಿಗೆ ಮಾತು ಬೆಳೆದು ಜಗಳ ನಡೆದೇ ಹೋಯ್ತು... ಕೊನೆಯಲ್ಲಿ ಈ ಜಗಳ ಕೊಲೆಯಲ್ಲಿ ಅಂತ್ಯವಾಯ್ತು!
ಈ ಫೋಟೊದಲ್ಲಿ ಕಾಣ್ತಿರೋ ವ್ಯಕ್ತಿ 68 ವರ್ಷದ ಪುಟ್ಟರಾಜು. ಗ್ರಾಮದ ತನ್ನ ಜಮೀನಿನಲ್ಲಿ ವ್ಯವಸಾಯ ಮಾಡ್ಕೊಂಡು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದರು. ಆದ್ರೆ, ಜಮೀನಿಗೆ ರಸ್ತೆ ವಿಚಾರವಾಗಿ ಬಲು ದಿನಗಳಿಂದ ವ್ಯಾಜ್ಯವಿತ್ತು.
ಇಂದು ಗ್ರಾಮದ ಹಿರಿಯರ ಸಮ್ಮುಖದಲ್ಲಿ ನಡೆದ ರಾಜಿ ಸಂಧಾನ ಸಭೆಯಲ್ಲಿ ದಾಯಾದಿಗಳಿಂದಲೇ ಅವರು ಕೊಲೆಯಾಗಿ ಹೋಗಿದ್ದಾರೆ! ಹೌದು, ನೆಲಮಂಗಲ ತಾಲ್ಲೂಕಿನ ಬೈರಸಂದ್ರದ ಪುಟ್ಟರಾಜು ತನ್ನ ದಾಯಾದಿಗಳಾದ ಮಾಜಿ ಸೈನಿಕ ಮಂಜುನಾಥ್, ಭೈರಪ್ಪ, ಶೇಖರಪ್ಪ, ಪವನ್, ಗೌತಮ್ ಎಂಬವರಿಂದ ಕೊಲೆಯಾಗಿದ್ದಾರೆ.
ಪುಟ್ಟರಾಜು ಹಾಗೂ ಸಂಬಂಧಿಕರಿಗೆ ಬೈರಸಂದ್ರ ಗ್ರಾಮದ ಸರ್ವೆ ನಂ. 7ರಲ್ಲಿ 4 ಜನ್ರಿಗೆ ಜಂಟಿ ಖಾತೆಯಲ್ಲಿ ಜಮೀನು ಇತ್ತು. ಈ ಜಮೀನಿಗೆ ರಸ್ತೆ ಬಿಡುವ ವಿಚಾರದಲ್ಲಿ ಸಿದ್ದರಾಜು ಎಂಬವರು ಮನೆ ಬಳಿ ರಾಜಿ ಸಂಧಾನ ಮಾತುಕತೆಗೆ ಕರೆದಿದ್ರು. ಇದೇ ವೇಳೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೇರಿ ಮಂಜುನಾಥ್, ಶೇಖರಪ್ಪ, ಗೌತಮ್, ಭೈರಪ್ಪ ಅವರು ಪುಟ್ಟರಾಜು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪುಟ್ಟರಾಜುರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತ ಪಟ್ಟಿದ್ದಾರೆ.
ಆರೋಪಿ ಮಂಜುನಾಥ್ ಮಾಜಿ ಸೈನಿಕನಾಗಿದ್ದು, ನನ್ನ ಬಳಿ ಲೈಸೆನ್ಸ್ಡ್ ಗನ್ ಇದೆ ಎಂದು ಊರಿನಲ್ಲಿ ಎಲ್ಲರನ್ನೂ ಬೆದರಿಸುತ್ತಾ ದೌರ್ಜನ್ಯ ನಡೆಸುತ್ತಿದ್ದ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಕೇಸ್ ದಾಖಲಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
Kshetra Samachara
18/06/2022 01:46 pm