ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ಅಪರಿಚಿತ ಮಹಿಳೆಯನ್ನು ಕಳೆದ ರಾತ್ರಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ! ಆಂಧ್ರ ಮೂಲದ ಸುಮಾರು 35ರ ಹರೆಯದ ಅಪರಿಚಿತ ಮಹಿಳೆ ಮತ್ತು ಒಬ್ಬ ವ್ಯಕ್ತಿ ಕೆಲಸವನ್ನರಸಿ ಆಂಧ್ರ ಕಡೆಯಿಂದ ಸೂಲಿಬೆಲೆಗೆ ವಾರದ ಹಿಂದೆ ಬಂದು ನೆಲೆಸಿದ್ದರು.
ಇದೇ ಸೂಲಿಬೆಲೆ ಗ್ರಾಮದ ವೃತ್ತಿಪರ ಕಳ್ಳ ನರಸಿಂಹ ಮೂರ್ತಿ(50) ಎಂಬಾತ ಕೊಲೆಯಾದ ಮಹಿಳೆ ಮತ್ತು ಆಕೆಯ ಜೊತೆಗಿದ್ದ ವ್ಯಕ್ತಿಗೆ ಆಶ್ರಯ ನೀಡಿದ್ದ. ಅದೇನಾಯ್ತೋ ಏನೋ ನಿನ್ನೆ ಕ್ಷುಲ್ಲಕ ಕಾರಣಕ್ಕೆ ಮೂವರ ನಡುವೆ ಜಗಳ ನಡೆದಿದೆ. ರಾತ್ರಿ ಎಣ್ಣೆ ಮತ್ತಲ್ಲಿ ನಡೆದ ಜಗಳ ಮಹಿಳೆಯ ಕೊಲೆಯಲ್ಲಿ ಅಂತ್ಯವಾಗಿದೆ.
ನರಸಿಂಹ ಮೂರ್ತಿ ಮತ್ತೊಬ್ಬ ಆಸಾಮಿ ಇಬ್ಬರೂ ಈಗ ನಾಪತ್ತೆಯಾಗಿದ್ದಾರೆ. ಇಬ್ಬರಲ್ಲಿ ಓರ್ವ ಸಿಕ್ಕರೂ ಕೊಲೆಗೆ ನಿಖರ ಕಾರಣ ಗೊತ್ತಾಗಲಿದೆ. ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
Kshetra Samachara
24/05/2022 04:51 pm