ಆನೇಕಲ್: ಮೂವರು ದುಷ್ಕರ್ಮಿಗಳ ತಂಡ ಯುವಕನಿಗೆ ಚಾಕುವಿನಿಂದ ಇರಿದು, ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಆನೇಕಲ್ ಪಟ್ಟಣದ ಲಕ್ಷ್ಮಿ ನರಸಿಂಹ ಚಿತ್ರಮಂದಿರ ಬಳಿ ನಡೆದಿದೆ. ಆನೇಕಲ್ ಮೂಲದ ರಾಜೇಶ್ (25) ಚಾಕು ಇರಿತಕ್ಕೊಳಗಾದ ಯುವಕ.
ಹೌದು. ಆನೇಕಲ್ ಪಟ್ಟಣದ ಲಕ್ಷ್ಮಿನರಸಿಂಹ ಚಿತ್ರಮಂದಿರದ ಬಳಿ ರಾಜೇಶ್ ಕಳೆದ ರಾತ್ರಿ ಸುಮಾರು 9.30ಕ್ಕೆ ಗಾಡಿ ರಿಪೇರಿ ಮಾಡಿಸಲು ಹೋಗಿದ್ದರಂತೆ. ಈ ವೇಳೆ ಮೂತ್ರ ವಿಸರ್ಜನೆ ಮಾಡಲು ಬಯಲು ಪ್ರದೇಶಕ್ಕೆ ಹೋದಾಗ ಹಿಂಬದಿಯಿಂದ ಮೂವರು ದುಷ್ಕರ್ಮಿಗಳು ಆತನ ಮೇಲೆ ಏಕಾಏಕಿ ದಾಳಿ ನಡೆಸಿ ಹಲ್ಲೆ ಮಾಡಿ, ನಗದು ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ..
ಇನ್ನೂ ಅಲ್ಲಿಂದ ತಪ್ಪಿಸಿಕೊಂಡು ರಾಜೇಶ್, ಸ್ನೇಹಿತರ ಸಹಾಯ ಪಡೆದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬಳಿಕ ಆನೇಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ರಾಜೇಶ್‌ನನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ತನಿಖೆಯನ್ನು ಮುಂದುವರೆಸಿದ್ದಾರೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
30/03/2022 06:40 pm