ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ತುಮಕೂರು ರಸ್ತೆ ಮಾದವಾರ ಬಳಿ ರೋಡ್ ರಾಬರಿ ಸೀನ್ ನಡೆದಿದೆ. ಮಾದಾವರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳ ತಂಡವು ಅದರಲ್ಲಿದ್ದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಅಷ್ಟೇ ಅಲ್ಲದೆ ಕಾರಿನೊಂದಿಗೆ 1 ಕೋಟಿ ರೂ.ಗೂ ಅಧಿಕ ಮೊತ್ತ ದೋಚಿ ಪರಾರಿಯಾಗಿದೆ.
'ಮಹಾರಾಷ್ಟ್ರದ ಸಾಂಗ್ಲಿ ಮೂಲದ ಉದ್ಯಮಿ ಯೋಗೇಶ್, ತಮಿಳುನಾಡಿನ ನಾಗರಕೊಯ್ಲು ಮೂಲದ ಚಿನ್ನದ ವ್ಯಾಪಾರಿ ಜೋಸೆಫ್ ಬಳಿ 2.5 ಕೆ.ಜಿ.ಚಿನ್ನದ ಗಟ್ಟಿ ಖರೀದಿಸಿದ್ದರು. ಅದನ್ನು ಕೊಡಲು ದಿನೇಶ್, ಸತ್ಯವೇಲು, ಫ್ರಾಂಕ್ಲಿನ್, ಮಣಿಕಂಠನ್ ಅವರು ಬುಧವಾರ ತಮಿಳುನಾಡಿನಿಂದ ಹುಬ್ಬಳ್ಳಿಗೆ ಹೋಗಿದ್ದರು. ಯೋಗೇಶ್‌ಗೆ ಚಿನ್ನದ ಗಟ್ಟಿ ನೀಡಿ ಅವರಿಂದ ಹಣ ಪಡೆದುಕೊಂಡು ಬ್ರೀಜಾ ಕಾರಿನಲ್ಲಿ ತಮಿಳುನಾಡಿನತ್ತ ಹೊರಟಿದ್ದರು. ಈ ವೇಳೆ ಇನ್ನೋವಾ ಕಾರಿನಲ್ಲಿ ಬಂದ ಸುಮಾರು ಏಳು ಮಂದಿ ದುಷ್ಕರ್ಮಿಗಳು ಕಬ್ಬಿಣದ ರಾಡ್ ಹಾಗೂ ದೊಣ್ಣೆಯಿಂದ ಕಾರಿನ ಗಾಜು ಒಡೆದು, ಅದರಲ್ಲಿದ್ದವರನ್ನು ಕೆಳಗಿಳಿಸಿದ್ದಾರೆ. ಬಳಿಕ ಆ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮಾದಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಾರಿನಲ್ಲಿದ್ದವರೇ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಗೆ ನೆಡೆಸುತ್ತಿದ್ದಾರೆ. ದರೋಡೆ ಗ್ಯಾಂಗ್‌ನ ಸುಳಿವಿನ ಬಗ್ಗೆ ಸಿಸಿಟಿವಿ ಕ್ಯಾಮೆರಾ ಪರಿಶೀಲನೆಗೂ ಪೊಲೀಸರು ಮುಂದಾಗಿದ್ದಾರೆ. ಅಲ್ಲದೆ ಪ್ರತ್ಯೇಕ ಮೂರು ವಿಶೇಷ ತಂಡಗಳನ್ನ ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
.
PublicNext
13/03/2022 11:25 am