ಬೆಂಗಳೂರು: ತಲೆಗೆ ಕಲ್ಲು ಎಸೆದಳೆಂಬ ಕಾರಣಕ್ಕೆ ಸಂಚಾರಿ ಎಎಸ್ಐ ಒಬ್ಬರು ವಿಕಲಾಂಗ ಮಹಿಳೆಯನ್ನು ಬೂಟುಗಾಲಿನಿಂದ ಒದ್ದು ಆಕೆಯ ಜಡೆ ಹಿಡಿದು ಎಳೆದಾಡಿದ್ದಾರೆ. ಬೆಂಗಳೂರು ನಗರದ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ಹಲವಾರು ದಿನಗಳಿಂದ ಸಂಚಾರಿ ಪೊಲೀಸರು ವಿಕಲಾಂಗ ಮಹಿಳೆಯ ವಾಹನ ಟೋಯಿಂಗ್ ಮಾಡ್ತಿದ್ದರು ಎನ್ನಲಾಗಿದೆ. ಇದರಿಂದ ರೋಸಿ ಹೋದ ಆಕೆ ಎಎಸ್ಐ ನಾರಾಯಣ್ ಮೇಲೆ ಕಲ್ಲೆಸೆದಿದ್ದಾಳೆ. ನಾರಾಯಣ್ ತಲೆಗೆ ಕಲ್ಲು ತಾಗಿ ರಕ್ತ ಒಸರಿದೆ. ಇದರಿಂದ ಸಿಟ್ಟಿಗೆದ್ದ ಎಎಸ್ಐ ನಾರಾಯಣ್ ವಿಕಲಾಂಗ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಆಕೆಯನ್ನು ನೆಲಕ್ಕೆ ಕೆಡವಿ ಬೂಟುಗಾಲಿನಿಂದ ಒದ್ದಿದ್ದಾರೆ ಹಾಗೂ ಜಡೆ ಹಿಡಿದು ಎಳೆದಾಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಕಲ್ಲೆಸೆದ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಇತರ ಸಂಚಾರಿ ಪೊಲೀಸರು ವಿಕಲಾಂಗ ಮಹಿಳೆಗೆ ಅವಾಚ್ಯ ಪದಗಳಿಂದ ಬೈದಿದ್ದಾರೆ. ಜನವರಿ 24ರಂದು ಈ ಘಟನೆ ನಡೆದಿದ್ದು ಅದರ ವಿಡಿಯೋ ಈಗ ವೈರಲ್ ಆಗಿದೆ.
ಆಕೆ ಉದ್ದೇಶಪೂರ್ವಕವಾಗಿ ಸಂಚಾರಿ ಪೊಲೀಸ್ ಮೇಲೆ ಕಲ್ಲು ಎಸೆದಿಲ್ಲ. ಟೋಯಿಂಗ್ ವಾಹನದ ಮೇಲೆ ಕಲ್ಲು ಎಸೆದಿದ್ದು ಅದು ತಪ್ಪಿ ಎಎಸ್ಐ ನಾರಾಯಣ್ ತಲೆಗೆ ತಾಕಿದೆ. ತಪ್ಪು ಮಾಡಿದ ಆಕೆ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದಿತ್ತು. ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಬಹುದಿತ್ತು. ಅದು ಬಿಟ್ಟು ವಿಕಲಾಂಗ ಮಹಿಳೆ ಎಂಬುದನ್ನೂ ನೋಡದೇ ಸಾರ್ವಜನಿಕವಾಗಿ ಆಕೆ ಮೇಲೆ ಬೂಟುಗಾಲಿನಿಂದ ಒದ್ದು ಅಮಾನುಷವಾಗಿ ಹಲ್ಲೆ ಮಾಡಿದ್ದು ಸರಿ ಅಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
Kshetra Samachara
30/01/2022 11:45 am