ಬೆಂಗಳೂರು: ಸ್ಮಗ್ಲರ್ ಗಳಿಂದಲೇ ರಕ್ತ ಚಂದನ ರಾಬರಿ ಮಾಡಿದ್ದ ಪೊಲೀಸ್ ಕಾನ್ ಸ್ಟೇಬಲ್ ಗಳನ್ನು ನಗರ ಪೊಲೀಸ್ ಆಯುಕ್ತರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಈ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಗಿರಿನಗರ ಹೆಡ್ ಕಾನ್ಸ್ ಟೇಬಲ್ ಮೋಹನ್ ಹಾಗೂ ಮಹದೇವಪುರ ಹೆಡ್ ಕಾನ್ಸ್ ಟೇಬಲ್ ಮಮ್ತೇಶ್ ಗೌಡ ಅಮಾನತು ಆದವರು. 2018 ರಿಂದ ಸಿಸಿಬಿ ಸಿಬ್ಬಂದಿಯಾಗಿದ್ದ ಮೋಹನ್, ಮಮ್ತೇಶ್ ಕೆಲ ತಿಂಗಳ ಹಿಂದೆ ಬೇರೆ ಬೇರೆ ಠಾಣೆಗೆ ವರ್ಗಾವಣೆ ಆಗಿದ್ರು. ಸಿಸಿಬಿಯಲ್ಲಿದ್ದ ವೇಳೆ ಸೀಜ್ ಮಾಡಿದ್ದ ರಕ್ತ ಚಂದನ ಇಟ್ಟುಕೊಂಡು ಕಳ್ಳಾಟವಾಡಿದ್ದ ಇವರಿಬ್ಬರು, ರಕ್ತಚಂದನ ಸ್ಮಗ್ಲರ್ ಗಳಿಂದಲೇ ರಾಬರಿ ಮಾಡಿ ಆ ರಕ್ತ ಚಂದನವನ್ನು ಮತ್ತೊಬ್ಬ ಸ್ಮಗ್ಲರ್ ಗೆ ಮಾರಾಟ ಮಾಡಿರೋ ಆರೋಪ ಹಿನ್ನೆಲೆಯಲ್ಲಿ ಸಸ್ಪೆಂಡ್ ಮಾಡಲಾಗಿದೆ. ಈ ಕುರಿತು ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ಸಂಬಂಧ ಕೇಂದ್ರವಲಯ ಐಜಿಪಿ ಚಂದ್ರಶೇಖರ್ ಗೆ ಬೆಂ.ಗ್ರಾ. ಎಸ್ ಪಿ ವಂಶಿಕೃಷ್ಣ ಮಾಹಿತಿ ನೀಡಿದ್ದರು. ಐಜಿಪಿ ಚಂದ್ರಶೇಖರ್ ರಿಂದ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಮಾಹಿತಿ ಸಿಕ್ಕಿದ್ದು, ಆ ಕೂಡಲೇ ಈ ಇಬ್ಬರು ಪೊಲೀಸರನ್ನು ಅಮಾನತು ಮಾಡಿ ತನಿಖೆಗೆ ಕಮಲ್ ಪಂತ್ ಆದೇಶಿಸಿದ್ದಾರೆ.
PublicNext
12/01/2022 12:10 pm