ಬೆಂಗಳೂರು: ಕಳೆದ ತಿಂಗಳು ಪುಟ್ಟೇನಹಳ್ಳಿ ಬಾಬಾ ವೈನ್ಸ್ ನಲ್ಲಿ ಕಂಠಪೂರ್ತಿ ಕುಡಿದು ಬಿಲ್ ಕೊಡದೆ, ವಂಚಿಸಿ ಪರಾರಿಯಾಗಿದ್ದ ಆತ. ಹೀಗೆ ಪರಾರಿಯಾಗಿ ಅದೇ ಏರಿಯಾದ ಗುರು ಬಾರ್ ನಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ನಡೆಸಿದ. ಹೀಗೆ ಮಾರಣಾಂತಿಕವಾಗಿ ಹೊಡೆದು ಎಸ್ಕೇಪ್ ಆಗಿದ್ದ ಅನಿಲ್‌ನನ್ನು ಇದೀಗ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.
ಡಿ. 21ರಂದು ಅನಿಲ್ ಮತ್ತು ಮೂವರು ಸ್ನೇಹಿತರ ತಂಡ, ಜೆಪಿ ನಗರದ ಸಿದ್ಧೇಶ್ವರ ಚಿತ್ರಮಂದಿರ ಬಳಿಯ ಬಾಬಾ ವೈನ್ಸ್ ಗೆ ಬಂದು, ಕಂಠಪೂರ್ತಿ ಕುಡಿದು 3 ಸಾವಿರ ಬಿಲ್ ಮಾಡಿದ್ದಾರೆ. ಆದರೆ, ಹಣ ಕೊಡದೆ ಕಾಲ್ಕೀಳಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಕ್ಯಾಶಿಯರ್, ಬಿಲ್ ಪಾವತಿಸಲು ಹೇಳಿದ್ದಾರೆ. 5 ನಿಮಿಷ, ಕಾರ್ಡ್ ತಂದು ಸ್ವೈಪ್ ಮಾಡ್ಬೇಕು ಎಂದೇಳಿ ಹೊರಟ ಅನಿಲ್, ಬಳಿಯ ಗುರು ಬಾರ್ ಆಂಡ್ ರೆಸ್ಟೋರೆಂಟ್ ಗೆ ತೆರಳಿದ್ದಾನೆ.
ಅಲ್ಲಿ ಪರ್ವೇಜ್ ಖಾನ್ ಎಂಬಾತನ ಜೊತೆ ದಾರಿ ಬಿಡುವ ವಿಚಾರಕ್ಕೆ ಕಿರಿಕ್ ತೆಗೆದಿದ್ದಾನೆ. ಇಬ್ಬರ ಮಧ್ಯೆ ವಾಕ್ಸಮರ ನಡೆದು ಅನಿಲ್, ಪರ್ವೇಜ್ ತಲೆಗೆ ಬಿಯರ್ ಬಾಟಲ್ ನಿಂದ ಹೊಡೆದಿದ್ದಾನೆ. ಈ ಹಲ್ಲೆಯಿಂದ ಗಂಭೀರ ಗಾಯಗೊಂಡ ಫರ್ವೇಜ್ ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ, ಪುಟ್ಟೇನಹಳ್ಳಿ ಠಾಣೆಗೆ ಮಾಹಿತಿ ನೀಡಿದರು. ದೂರು ದಾಖಲಿಸಿದ ಪೊಲೀಸರು ಆರೋಪಿ ಅನಿಲನನ್ನು ಬಂಧಿಸಿ, ಜೈಲಿಗೆ ಹಾಕಿದ್ದಾರೆ.
PublicNext
06/01/2022 06:54 pm