ಬೆಂಗಳೂರು: ನಶೆ ದಂಧೆಕೋರರು ಮಾಡುತ್ತಿರುವ ಆಟಾಟೋಪಗಳಿಂದಾಗಿ ರಾಜಧಾನಿ ಬೆಂಗಳೂರಿಗೆ ಡ್ರಗ್ಸ್ ಕಳಂಕ ತಪ್ಪದಂತಾಗಿದೆ. ಇವರನ್ನೆಲ್ಲ ಮಟ್ಟ ಹಾಕಲ ದಂಧೆಕೋರರ ಮೇಲೆ ಪೊಲೀಸರು ಗುರಿ ಎಂಬ ಗುರಾಣಿ ಇಟ್ಟಿದ್ದಾರೆ. ಪರಿಣಾಮ ಒಂದೊಂದೇ ಕಿಲಾಡಿ ಕುಳಗಳು ಹೊರ ಬಂದು ಬಲೆಗೆ ಬೀಳುತ್ತಿವೆ.
ಅದರಂತೆ ಇವತ್ತು ಕೂಡ ಡ್ರಗ್ಸ್ ದಂಧೆ ನಡೆಸುತ್ತಿದ್ದ ಇನ್ನಿಬ್ಬರು ಖತರ್ನಾಕ್ ಖದೀಮರು ಸಿಕ್ಕಿ ಬಿದ್ದಿದ್ದಾರೆ. ಹಾಲಿನ ಪೌಡರ್‌ನ ಬಾಕ್ಸ್‌ಗಳಲ್ಲಿ ನಶೆ ಪದಾರ್ಥಗಳನ್ನು ತುಂಬಿ ಸಾಗಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಿರುವ ಪೊಲೀಸರು ಈತನಿಗೆ ಸಹಕರಿಸಿದ್ದ ಬೆಂಗಳೂರು ನಿವಾಸಿ ಅಂಜುಮ್ ರಝಾಕ್ ಎಂಬಾಕೆಗೆ ನೋಟಿಸ್ ನೀಡಿದ್ದಾರೆ.
ಬೆಂಗಳೂರಿನ ಹೆಸರಾಂತ ರಿಯಲ್ ಎಸ್ಟೇಟ್ ಕಂಪನಿ ಪ್ರೆಸ್ಟೀಜ್ ಗ್ರುಪ್‌ನ ಮಾಲೀಕ ಇರ್ಫಾನ್ ರಝಾಕ್‌ನ ತಂಗಿ ಅಂಜುಮ್ ರಝಾಕ್ ಸಾವಿರಾರು ಕೋಟಿ ಆದಾಯ ಹೊಂದಿದ್ದರು ಡ್ರಗ್ಸ್ ಕೆಲಸಕ್ಕೆ ಯಾಕೆ ಕೈ ಹಾಕಿದಳು? ಎಂಬುದೇ ಪ್ರಶ್ನೆಯಾಗಿದೆ. ಸಾಲದ್ದಕ್ಕೆ ಈಕೆ ಕೈ ಜೋಡಿಸಿದ್ದು ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್ ಒಬೆದ್ ಒಕೆಚುಕ್ವು ಎಂಬಾತನೊಂದಿಗೆ. ಡಿಸೆಂಬರ್ 14ರಂದು ಈ ನಟೋರಿಯಸ್ ನಶೆ ದಂಧೆಕೋರನನ್ನು ಅರೆಸ್ಟ್ ಮಾಡಿದ ಪೊಲೀಸರಿಗೆ ಇದರಲ್ಲಿ ಅಂಜುಮ್ ರಝಾಕ್ ಕೈವಾಡವೂ ಇದೆ ಎಂಬುದು ತಿಳಿದು ಬಂದಿದೆ. ಒಬೆದ್ ಒಕೆಚುಕ್ವುನ ವಾಟ್ಸ್‌ಆ್ಯಪ್ ಚಾಟ್‌ಗಳನ್ನು ಪರಿಶೀಸಿದಾಗ ಪೊಲೀಸರಿಗೆ ಸ್ಪಷ್ಟ ಪುರಾವೆಗಳು ಸಿಕ್ಕಿವೆ. ಇನ್ನು ಫ್ರೆಜರ್ ಟೌನ್‌ನ ನಂದಿದುರ್ಗ ಮಾರ್ಗದಲ್ಲಿನ ಅಂಜುಮ್ ಮನೆಗೆ ಡ್ರಗ್ ಸಪ್ಲೈ ಮಾಡಿರುವುದನ್ನು ಆರೋಪಿ ಬಾಯ್ಬಿಟ್ಟಿದ್ದಾನೆ.
ಆರೋಪಿ ಹಾಲಿನ ಡಬ್ಬದಲ್ಲಿ ಎಕ್ಸ್‌ಟಸಿ ಮಾತ್ರೆ, ಗಾಂಜಾ ಇಟ್ಟು ಪೆಡಲಿಂಗ್ ಮಾಡುತ್ತಿದ್ದ. ಅಂಜುಮ್ ಮಾತ್ರವಲ್ಲ ದೊಡ್ಡವರ ಮಕ್ಕಳು, ಸೆಲೆಬ್ರಿಟಿಗಳು ಪೆಡ್ಲರ್ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆರೋಪಿ ಕೊಟ್ಟ ಮಾಹಿತಿಯಿಂದ ಪೊಲೀಸರು ಅಂಜುಮ್ ರಝಾಕ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ ಹಾಗೂ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
Kshetra Samachara
16/12/2021 11:37 am