ಯಲಹಂಕ: ಸಿಂಗನಾಯಕನಹಳ್ಳಿ ಪಂಚಾಯತಿ ವ್ಯಾಪ್ತಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಅಕ್ರಮ ಬಡಾವಣೆ ನಿರ್ಮಾಣದ ಹೆಸರಿನಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಪಿಡಿಒ ಹೆಸರು ಮತ್ತು ಪಂಚಾಯ್ತಿ ಸೀಲ್ ಪೋರ್ಜರಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೊನ್ನೇನಹಳ್ಳಿಯ ಮುನಿರಾಮ ರೆಡ್ಡಿ ಹಾಗೂ ಅಳಿಯ ದಿನಕರ ರೆಡ್ಡಿ ಶ್ರೀಸಾಯಿ ಕಾಳೇಶ್ವರಿ ಎನ್ ಕ್ಲೇವ್ ಎಂಬ ಬಡಾವಣೆ ನಿರ್ಮಿಸಿದ್ದಾರೆ. ಕೃಷಿ ಜಮೀನಿನ ಭೂ ಪರಿವರ್ತನೆ ಮಾಡದೆ ಡಿ.ಸಿ. ಕನ್ವರ್ಷನ್ ಹೆಸರಲ್ಲಿ ಫ್ಲೆಕ್ಸ್ ಮತ್ತು ಬೋರ್ಡ್ಸ್ ಹಾಕಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ ಎಂಬ ದೂರುಗಳು ಬರ್ತಿದ್ದವು. ನಿರ್ಮಾಣ ಮಾಡಿರುವ ಜಾಗ ಡಿ.ಸಿ. ಕನ್ವರ್ಶನ್ ಆಗಿಲ್ಲ. ಆದರೂ ಖರೀದಿದಾರರಿಗೆ ಸುಳ್ಳು ದಾಖಲೆ ಸೃಷ್ಟಿಸಿ ಜಾಗದ ಮಾರಾಟಕ್ಕೆ ಮಾವ ಮತ್ತು ಅಳಿಯ ಯತ್ನಿಸಿದ್ದಾರೆ. ಈ ಜಾಗ ಇದುವರೆಗೆ ಕೃಷಿ ವಲಯದಲ್ಲಿ ಇರುವುದು ಗ್ರಾಹಕರಿಗೆ ಗೊತ್ತಾಗಿದೆ.
ಗ್ರಾಮ ಪಂಚಾಯ್ತಿ ಪ್ಲ್ಯಾನ್ ಅಪ್ರೂವಲ್ ಕೂಡ ನಕಲಿಯಾಗಿದೆ. ಜೊತೆಗೆ ಪಿಡಿಒ ಅವರ ಸಹಿಯನ್ನೂ ಫೋರ್ಜರಿ ಮಾಡಿದ್ದರಿಂದ ಪಿಡಿಒ ದಾಮೇದರ್ ಅವರು ರಾಜಾನುಕುಂಟೆ ಠಾಣೆಗೆ ದೂರು ನೀಡಿದ್ದಾರೆ. ಪಿಡಿಒ ಸಹಿ, ಸೀಲ್ ನಕಲು ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಮೋಸ ಹೋಗಿರುವ ನಿವೇಶನದ ಖರೀದಿದಾರರು ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ. ಇವರು ಈ ಮೊದಲು ಇದೇ ರೀತಿ ಕೃಷಿ ಜಮೀನಿನಲ್ಲಿ ಲೇಔಟ್ ನಿರ್ಮಿಸಿ ಗ್ರಾಹಕರಿಗೆ ಮೋಸ ಮಾಡಿರುವುದಾಗಿ ಹೊನ್ನೇನಹಳ್ಳಿ ಗ್ರಾಮಸ್ಥರೂ ದೂರಿದ್ದಾರೆ.
Kshetra Samachara
15/12/2021 07:51 pm