ಬೆಂಗಳೂರು: ಗಂಡ- ಹೆಂಡತಿ ಜಗಳದಲ್ಲಿ ಹೆಣ್ಣು ಕೊಟ್ಟ ಅತ್ತೆ ಬಲಿಯಾಗಿದ್ದಾರೆ. ಕುಡಿದ ಆಮಲಿನಲ್ಲಿ ಕನ್ಯಾದಾನ ಮಾಡಿದ್ದ ಅತ್ತೆಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದಿದ್ದ ಅಳಿಯನನ್ನ ಎಚ್ ಎಎಲ್ ಪೊಲೀಸರು ಬಂಧಿಸಿದ್ದಾರೆ.
ಮಾರತ್ ಹಳ್ಳಿಯ ಸಂಜಯನಗರ ನಿವಾಸಿ ಸೌಭಾಗ್ಯ ಕೊಲೆಯಾದ ಅತ್ತೆಯಾಗಿದ್ದು, ಕೊಲೆ ಆರೋಪದಡಿ ಅಳಿಯ ನಾಗರಾಜ್ ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಜುಲೈ 13ರಂದು ಕೊಲೆ ಕೃತ್ಯ ನಡೆದಿತ್ತು.ಆರೋಪಿ ನಾಗರಾಜ ಕಳೆದ 6 ವರ್ಷದ ಹಿಂದೆ ಭವ್ಯಶ್ರೀ ಎಂಬುವವರನ್ನು ವಿವಾಹವಾಗಿದ್ದ.
ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ 5 ವರ್ಷದ ಮಗುವಿತ್ತು. ವೃತ್ತಿಯಲ್ಲಿ ಡ್ರೈವಿಂಗ್ ಕೆಲಸ ಮಾಡುತ್ತಿದ್ದ ನಾಗರಾಜ ಕುಡಿತದ ಚಟಕ್ಕೆ ಬಿದ್ದಿದ್ದ. ಹಾಗಾಗಿ ಆಗಾಗ ಮನೆಯಲ್ಲಿ ಗಲಾಟೆ ಆಗುತಿತ್ತು. ಗಂಡನ ಕಾಟ ತಾಳಲಾರದೆ ಮೂರು ವರ್ಷಗಳಿಂದ ಸಂಜಯನಗರದಲ್ಲಿರುವ ತನ್ನ ತಾಯಿ ಮನೆಗೆ ಭವಶ್ರೀ ಬಂದಿದ್ದಳು.
ಈ ಮಧ್ಯೆ ವಿಚ್ಛೇದನಕ್ಕಾಗಿ ತಯಾರಿ ನಡೆಯುತಿತ್ತು. ಈ ನಡುವೆ ಕುಡಿದ ಅಮಲಿನಲ್ಲಿದ್ದ ನಾಗರಾಜನಿಗೆ ಪತ್ನಿ ಮತ್ತೆ ಬೇಕು ಅನಿಸಿದೆ. ಜುಲೈ 12ರಂದು ಅತ್ತೆ ಮನೆ ಬಳಿ ಬಂದು ಗಲಾಟೆ ಮಾಡಿದ್ದ.
ಹೆಂಡತಿಯನ್ನು ತನ್ನೊಟ್ಟಿಗೆ ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದ.ಈ ವೇಳೆ ಅತ್ತೆ ಸೌಭಾಗ್ಯ ಬುದ್ಧಿ ಹೇಳಿ ಕಳಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ನಾಗರಾಜ ಬುದ್ದಿ ಕಲಿಸಲು ತೀರ್ಮಾನಿಸಿದ್ದ.
ಕಂಠಪೂರ್ತಿ ಕುಡಿದು ಜುಲೈ 13 ರಂದು ಸಂಜೆ ಸುತ್ತಿಗೆ ಖರೀದಿ ಮಾಡಿ ಸಂಜಯನಗರದಲ್ಲಿ ಸೊಪ್ಪು ವ್ಯಾಪಾರ ಮಾಡುತ್ತಿದ್ದ ಜಾಗಕ್ಕೆ ಬಂದು ಏಕಾಏಕಿ ಸುತ್ತಿಗೆಯಿಂದ ಐದಾರು ಏಟು ಅತ್ತೆಗೆ ಹೊಡೆದಿದ್ದಾನೆ.
ಸ್ಥಳದಲ್ಲೇ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಸೌಭಾಗ್ಯ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಎಚ್ ಎಎಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಆರೋಪಿ ನಾಗರಾಜನನ್ನ ಎಚ್ ಎಎಲ್ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ 'ನಾನು ನನ್ನ ಅತ್ತೆಯನ್ನು ಕೊಲ್ಲುವ ಉದ್ದೇಶ ಇರಲಿಲ್ಲ ನನ್ನ ಹೆಂಡತಿ ಕೊಲ್ಲುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದೆ. ಆದರೆ ಕುಡಿದ ಮತ್ತಿನಲ್ಲಿ ಯಾರು ಅನ್ನೋದೆ ಗೊತ್ತಾಗಿಲ್ಲ.ಹೆಂಡತಿ ಅಂತಾ ಅತ್ತೆಗೆ ಹೊಡೆದುಬಿಟ್ಟೆ ಎಂದು ಆರೋಪಿ ಅಳಲು ತೋಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
PublicNext
19/07/2022 04:28 pm