ದೊಡ್ಡಬಳ್ಳಾಪುರ: ಮಧ್ಯರಾತ್ರಿ ಕ್ವಾಲಿಸ್ ವಾಹನದಲ್ಲಿ ಬಂದ ಕಳ್ಳರು ಕೊಟ್ಟಿಗೆಯಲ್ಲಿದ್ದ 11 ಕುರಿಗಳನ್ನು ಕದ್ದು ಪರಾರಿಯಾಗಿದ್ದಾರೆ. ಒಂದು ಲಕ್ಷ ಮೌಲ್ಯದ ಕುರಿ-ಮೇಕೆಗಳ ಕಳ್ಳತನದಿಂದ ರೈತ ಕುಟುಂಬ ಕಂಗಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ನಿನ್ನೆ ರಾತ್ರಿ 2 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಿವಾಸಿ ಓಬಳೇಶ್ ಕುಟುಂಬ ಕುರಿ ಸಾಕಣಿಕೆ ವೃತ್ತಿ ಮಾಡುತ್ತಿತ್ತು. ರಸ್ತೆ ಪಕ್ಕದಲ್ಲಿ ಕೊಟ್ಟಿಗೆಯನ್ನ ನಿರ್ಮಿಸಿ ರಾತ್ರಿ ಹೊತ್ತು ಕುರಿಗಳನ್ನ ಕೊಟ್ಟಿಗೆಯಲ್ಲಿ ಕೂಡಿಹಾಕುತ್ತಿದ್ದರು. ಮನೆ ಯಜಮಾನ ಓಬಳೇಶ್ ಪ್ರವಾಸ ನಿಮಿತ್ತ ಹೊರ ಊರಿನಲ್ಲಿದ್ದರು. ಇದೇ ಸಮಯಕ್ಕೆ ಹೊಂಚು ಹಾಕಿದ ಕಳ್ಳರು ಕುರಿ ಕಳ್ಳತನಕ್ಕೆ ಕೈ ಹಾಕಿದ್ದಾರೆ.
ನಿನ್ನೆ ರಾತ್ರಿ ಕ್ವಾಲಿಸ್ ವಾಹನದಲ್ಲಿ ಬಂದಿದ್ದ ನಾಲ್ವರು ಕಳ್ಳರು ಕೊಟ್ಟಿಗೆಯಲ್ಲಿದ್ದ ಕುರಿಗಳನ್ನ ಕ್ವಾಲಿಸ್ ವಾಹನಕ್ಕೆ ತುಂಬಿದ್ದಾರೆ. ಕುರಿಗಳ ಶಬ್ದ ಕೇಳಿ ಎಚ್ಚರಗೊಂಡ ಓಬಳೇಶ್ ಪತ್ನಿ ಸುಮಾ ಮನೆಯಿಂದ ಹೊರ ಬಂದು ನೋಡಿದ್ದಾರೆ. ಅದಾಗಲೇ 11 ಕುರಿಗಳನ್ನ ಕದ್ದು ಕ್ವಾಲಿಸ್ ವಾಹನಕ್ಕೆ ತುಂಬಿದ ಕಳ್ಳರು ಮತ್ತೆ ಕೊಟ್ಟಿಗೆಯಲ್ಲಿದ್ದ ಎರಡು ಕುರಿಗಳನ್ನ ಕದಿಯಲು ಪ್ರಯತ್ನಿಸಿದ್ದಾರೆ. ಸುಮಾರನ್ನ ಕಂಡ ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರು ಪರಾರಿಯಾಗುತ್ತಿರುವ ಸುದ್ದಿಯನ್ನ ಪಕ್ಕದ ತಿಮ್ಮಸಂದ್ರ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಕಳ್ಳರನ್ನ ಹಿಡಿಯಲು ಕಾಯುತ್ತಿದ್ದಾಗ ಅತಿವೇಗದಲ್ಲಿ ಕ್ವಾಲಿಸ್‌ನಲ್ಲಿ ಬಂದ ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರು ಪರಾರಿಯಾಗಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Kshetra Samachara
14/07/2022 12:41 pm