ಬೆಂಗಳೂರು: ಸಿಟಿಯಲ್ಲಿ ಇತ್ತೀಚೆಗೆ ಪುಂಡರ ಅಟ್ಟಹಾಸ ಹೆಚ್ಚಾದಂಗೆ ಕಾಣ್ತಿದೆ. ಇದೇ ಕಾರಣಕ್ಕೆ ದಿನಕ್ಕೊಂದು ಹಲ್ಲೆ, ದಾಂಧಲೆ ಪ್ರಕರಣ ದಾಖಲಾಗುತ್ತಲೇ ಇದೆ. ಹೌದು, ಮೇ 13ರ ರಾತ್ರಿ 10:30ಕ್ಕೆ ಟಿಸಿ ಪಾಳ್ಯ ಮುಖ್ಯರಸ್ತೆಯಲ್ಲಿರುವ ಸಿ.ಆರ್. ಧಮ್ ಬಿರಿಯಾನಿ ಹೋಟೆಲ್ ಬಳಿ ಘಟನೆಯೊಂದು ನಡೆದಿದೆ.
ರಾತ್ರಿ ಕೆ.ಆರ್. ಪುರದ ಬಸವನಗರ ನಿವಾಸಿಗಳಾದ ಗುರು ಎಂಬವರು ಇಬ್ಬರು ಸ್ನೇಹಿತರ ಜೊತೆ ಬಿರಿಯಾನಿ ತಿನ್ನಲು ಬಂದಿದ್ದಾರೆ. ಆದರೆ, ಬಿರಿಯಾನಿ ಸೆಂಟರ್ ಬಳಿ ನಿಂತಿದ್ದ ಐವರನ್ನು ನೋಡಿ ಗುರು, ತನ್ನ ಸ್ನೇಹಿತನಿಗೆ ಅವನ ಜುಟ್ಟು ನೋಡೋ ಅಂದಿದ್ದಾನೆ. ಸಾಲದ್ದಕ್ಕೆ ಅವರು ಹೋಟೆಲ್ ನವರು ಅಂತ ತಿಳಿದು, ಬಿರಿಯಾನಿ ಇದೆಯಾ ಸರ್ ಎಂದಿದ್ದಾರೆ ಅಷ್ಟೇ. ಅಲ್ಲೇ ಜಗಳ ಶುರು... ʼಏನೋ ನಾನು ಬಿರಿಯಾನಿ ಮಾಡುವವನ ತರ ಕಾಣಿಸ್ತೀನಾʼ ಅಂತ ಸೀದಾ ಹಲ್ಲೆ ಮಾಡೋಕೆ ಮುಂದಾಗಿದ್ದಾನೆ.
ಅವಾಚ್ಯ ಶಬ್ದಗಳಿಂದ ಬೈಯ್ಯಲಾರಂಭಿಸಿದ ಆ ಐವರು, ದೊಣ್ಣೆಯಿಂದ ಗುರು ಹಾಗೂ ಆತನ ಸ್ನೇಹಿತ ವಿನಯ್ಗೆ ಥಳಿಸಿದ್ದಾರೆ. ಗುರು ತಲೆ, ಕೈಗೆ ಮಚ್ಚಿನೇಟು ಬಿದ್ದಿದೆ. ಈ ವೇಳೆ ಆರೋಪಿಗಳು ಗುರುವಿನ ಎರಡೂ ಕೈಗಳನ್ನು ಮುರಿದು ಅಟ್ಟಹಾಸ ಮೆರೆದಿದ್ದಾರೆ. ಸಾಲದ್ದಕ್ಕೆ ಗುರು ಹಾಗೂ ಸ್ನೇಹಿತನ ಬಳಿ ಇದ್ದ ಮೊಬೈಲ್ಗಳನ್ನು ಮತ್ತು ದ್ವಿಚಕ್ರ ವಾಹನಗಳನ್ನೂ ಕಸಿದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಹಲ್ಲೆ ನಡೆದ ಕೂಡಲೇ ಬಿಬಿಎಂಪಿಯಲ್ಲಿ ಸಿವಿಲ್ ಗುತ್ತಿಗೆದಾರನಾಗಿರುವ ಗುರು ಹಾಗೂ ವಿನಯ್ಗೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನು ಆರೋಪಿಗಳ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸ್ರು ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
PublicNext
26/05/2022 08:24 am