ವರದಿ: ಹರೀಶ್ ಗೌತಮನಂದ
ಆನೇಕಲ್ : ಗಂಡು ದಿಕ್ಕಿಲ್ಲದ ಮೂರು ಮಂದಿ ಮಹಿಳೆಯರಿರುವ ಕುಟುಂಬವಿದು. ತಾಯಿ-ಮಗಳು ಹಾಗೂ ಮೊಮ್ಮಗಳು ವಾಸವಿರುವ ಈ ಕುಟುಂಬದ ಮೇಲೆ ಗ್ರಾಮ ಪಂಚಾಯಿತಿ ನೌಕರನೊಬ್ಬನಿಂದ ಸ್ಥಳದ ವಿಚಾರವಾಗಿ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಬಗ್ಗೆ ಹಲವು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ಪ್ರಯೋಜನವಿಲ್ಲದೆ ಆ ಮಹಿಳೆಯರು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಇಂಡ್ಲವಾಡಿಯಲ್ಲಿ ಕಬ್ಬಿಣದ ರಾಡ್ ನಿಂದ ಗ್ರಾಪಂ ನೌಕರ, ಲಕ್ಷ್ಮಮ್ಮ ಹಾಗೂ ರೂಪ ಎಂಬ ತಾಯಿ- ಮಗಳ ಮೇಲೆ ಹಲ್ಲೆಗೈದಿದ್ದಾನೆ. ಇಂಡಲವಾಡಿ ಗ್ರಾಪಂ ನೌಕರ ಸೋಮಶೇಖರ್ ಹಾಗೂ ಕುಟುಂಬದ ವಿನೋದ್, ಕಮಲಮ್ಮ, ವೆಂಕಟಸ್ವಾಮಿ ಸೇರಿ ಲಕ್ಷ್ಮಮ್ಮ ಕುಟುಂಬದ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ.
ಇದೀಗ ಜಗಳದ ವೀಡಿಯೊ ಲಭ್ಯವಾಗಿದ್ದು, ಕುಟುಂಬದವರು ಆನೇಕಲ್ ಠಾಣೆಗೆ ದೂರು ನೀಡಿದ್ದರೂ ಕೇಸ್ ದಾಖಲಾಗದೆ ಇರುವುದಕ್ಕೆ ಪ್ರಭಾವಿ ರಾಜಕಾರಣಿಗಳಿಂದ ಪೊಲೀಸರ ಮೇಲೆ ಒತ್ತಡ ಹೇರಿದ್ದೇ ಕಾರಣವೆಂಬ ಅರೋಪ ಕೇಳಿಬಂದಿದೆ
ಲಕ್ಷ್ಮಮ್ಮ, ಮನೆ ಹಾಗೂ ಸ್ಥಳವನ್ನು ಕೆಲ ದಿನಗಳ ಹಿಂದೆ ಸೋಮಶೇಖರ್ ಕುಟುಂಬಕ್ಕೆ ಮಾರಿದ್ದಾರೆ. ಆದರೆ, ಸ್ಥಳದ ಅಳತೆ ವಿಚಾರವಾಗಿ ವ್ಯಾಜ್ಯ ಉಂಟಾಗಿ ಆಗಾಗ ಸೋಮಶೇಖರ್ ನ ಕುಟುಂಬ, ಲಕ್ಷ್ಮಮ್ಮನವರ ಕುಟುಂಬದ ಮೇಲೆ ಜಗಳಕ್ಕೆ ಬರುತ್ತಿದ್ದರು. ಈ ಬಗ್ಗೆ ಊರಿನ ಹಿರಿಯರು ಪಂಚಾಯಿತಿಕೆ ಮಾಡಿ ತೀರ್ಪು ನೀಡಿದ್ದರೂ ಆ ತೀರ್ಮಾನಕ್ಕೆ ಬೆಲೆ ಕೊಡದೆ ಸೋಮಶೇಖರ್ ಕುಟುಂಬ, ಲಕ್ಷ್ಮಮ್ಮ ಕುಟುಂಬದ ವಿರುದ್ಧ ಮತ್ತೆ ಜಗಳಕ್ಕೆ ಬರುತ್ತಿದ್ದರು.
ಇದೀಗ ಮೊನ್ನೆ ಕ್ಷುಲ್ಲಕ ಕಾರಣಕ್ಕೆ ಕ್ಯಾತೆ ತೆಗೆದು ಸೋಮಶೇಖರ್ ಪಂಚಾಯಿತಿ ಕೆಲಸದ ಮಧ್ಯೆ ಬಂದು, ಲಕ್ಷ್ಮಮ್ಮ ಕುಟುಂಬದ ಮೇಲೆ ರಾಡ್ ನಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.
ಒಟ್ಟಿನಲ್ಲಿ ಸಂತ್ರಸ್ತ ಕುಟುಂಬಕ್ಕೆ ರಕ್ಷಣೆ ಇಲ್ಲದಂತಾಗಿದೆ. ಈ ವಿಷಯದಲ್ಲಿ ಪೊಲೀಸರೂ ತಾರತಮ್ಯ ಧೋರಣೆ ಸಾಕಷ್ಟು ಅನುಮಾನ ಹುಟ್ಟಿಸಿದೆ. ಇನ್ನಾದರೂ ಪೊಲೀಸರು ಈ ತಾಯಿ- ಮಗಳಿಗೆ ಆದ ಅನ್ಯಾಯಕ್ಕೆ ಸ್ಪಂದಿಸುತ್ತಾರೆಯೇ? ಕಾದು ನೋಡೋಣ...
- ಹರೀಶ್ ಗೌತಮನಂದ ʼಪಬ್ಲಿಕ್ ನೆಕ್ಸ್ಟ್ʼ ಆನೇಕಲ್
Kshetra Samachara
15/05/2022 11:48 am