ಬೆಂಗಳೂರು: ನಗರದಲ್ಲಿ ಇತ್ತೀಚಿಗೆ ಮೂಕಪ್ರಾಣಿಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಇತ್ತೀಚೆಗೆ ಎರಡು ಮೂರು ತಿಂಗಳುಗಳಿಂದ ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಸುತ್ತಿರುವಂತಹ ಪ್ರಕರಣಗಳು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ. ಮೊನ್ನೆಯಷ್ಟೇ ರಸ್ತೆ ಬದಿಯಲ್ಲಿ ನಿಂತಿದ್ದ ನಾಯಿಯ ಮೇಲೆ ಕಾರನ್ನು ಚಲಾಯಿಸಿ ನಾಯಿಯನ್ನು ಕೊಲ್ಲಲಾಗಿತ್ತು. ಎರಡು ತಿಂಗಳ ಹಿಂದೆಯಷ್ಟೇ ಜಯನಗರದಲ್ಲಿ ಮನೆಯ ಮುಂದೆ ಮಲಗಿದ್ದ ಮೂಕಪ್ರಾಣಿ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿ ಸಾಯಿಸಲಾಗಿತ್ತು.
ಇತ್ತೀಚಿಗೆ ಸ್ಯಾಂಡಲ್ವುಡ್ನ ನಟಿ ರಮ್ಯಾ ಕೂಡ ಇದರ ಬಗ್ಗೆ ಧ್ವನಿ ಎತ್ತಿದ್ರು. ಮತ್ತು ಹಲವಾರು ಪ್ರಾಣಿ ಪ್ರಿಯರು ರಸ್ತೆಗಿಳಿದು ಪ್ರತಿಭಟನೆ ಮಾಡಿದ್ರು. ನಿನ್ನೆ ರಾತ್ರಿ ನಡೆದಂತಹ ಘಟನೆ ನೋಡಿ ಜನರು ಭಯಭೀತಗೊಂಡಿದ್ದಾರೆ. ನಿನ್ನೆ ರಾತ್ರಿ ದಕ್ಷಿಣ ಬೆಂಗಳೂರಿನ ಸೂರ್ಯಸಿಟಿ ಅಪಾರ್ಟ್ಮೆಂಟ್ನಲ್ಲಿ ವ್ಯಕ್ತಿಯೊಬ್ಬ ಒಂದು ಕೈಯಲ್ಲಿ ತಲ್ವಾರ್ ಹಿಡ್ಕೊಂಡು ಇನ್ನೊಂದು ಕೈಯಲ್ಲಿ ನಾಯಿಯನ್ನು ಹಿಡಿದು ಕೊಲ್ಲಲು ಮುಂದಾಗಿದ್ದ.
ಇದನ್ನು ನೋಡಿದಂತಹ ಅಪಾರ್ಟ್ಮೆಂಟ್ ನಿವಾಸಿಗಳು ಕೂಡಲೇ ನಾಯಿಯ ರಕ್ಷಣೆಗೆ ಮುಂದಾದರು. ಈ ವ್ಯಕ್ತಿ ಮೂಕ ಪ್ರಾಣಿಯನ್ನು ಸಾಯಿಸಲಿಕ್ಕೆ ತಲ್ವಾರ್ ತಂದವನು ಮುಂದೊಂದು ದಿನ ನಮ್ಮ ಮೇಲೆ ಹಲ್ಲೆ ಮಾಡಬಹುದೆಂದು ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ.
ಮೂರು ದಿನಗಳ ಹಿಂದಷ್ಟೇ ದಕ್ಷಿಣ ಬೆಂಗಳೂರಿನ ಪರಪ್ಪನ ಅಗ್ರಹಾರ ಬಳಿ 10 ನಾಯಿಗಳಿಗೆ ಊಟದಲ್ಲಿ ವಿಷ ಹಾಕಿ ಸಾಯಿಸಲಾಗಿತ್ತು. ಈ ಘಟನೆ ಮರೆಮಾಚುವ ಮುನ್ನ ಮೂಕ ಪ್ರಾಣಿಯ ಮೇಲೆ ದೌರ್ಜನ್ಯ ನಡೆದಿದೆ. ಒಟ್ನಲ್ಲಿ ದಿನದಿಂದ ದಿನಕ್ಕೆ ಮೂಕ ಪ್ರಾಣಿಗಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ.
PublicNext
30/04/2022 04:22 pm