ಬೆಂಗಳೂರು: ಬೈಯಪ್ಪನಹಳ್ಳಿ ಟು ವೈಟ್‌ಫೀಲ್ಡ್ ಮೆಟ್ರೋ ಮಾರ್ಗದ ಪ್ರಾಯೋಗಿಕ ಸಂಚಾರವನ್ನು ಅಕ್ಟೋಬರ್ ಕೊನೆಯ ವಾರದಲ್ಲಿ ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಸಿದ್ಧತೆ ನಡೆಸಿದೆ.
ಬಿಎಂಆರ್‌ಸಿಎಲ್‌ನ ಎಂಡಿ ಅಂಜುಮ್ ಪರ್ವೇಜ್ ಮಾಧ್ಯಮವೊಂದಕ್ಕೆ ನೀಡಿರುವ ಮಾಹಿತಿ ಪ್ರಕಾರ, "ನಮ್ಮ ಅಧಿಕಾರಿಗಳು ಪ್ರಾಯೋಗಿಕ ಸಂಚಾರ ನಡೆಸಲು ಸಿದ್ಧತೆ ನಡೆಸಿದ್ದಾರೆ. ಅಕ್ಟೋಬರ್ ಮಧ್ಯದ ವೇಳೆಗೆ ಮೆಟ್ರೋ ಕೋಚ್ ಅನ್ನು ಹೊಸ ಟ್ರ್ಯಾಕ್‌ಗೆ ಸ್ಥಳಾಂತರಿಸಲಾಗುವುದು. ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಏಕಕಾಲಕ್ಕೆ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.
"ನಾವು ವೈಟ್‌ಫೀಲ್ಡ್‌ಗೆ ರೈಲು ಓಡಿಸುವ ಮಹತ್ವಾಕಾಂಕ್ಷೆ ಹೊಂದಿದ್ದೇವೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಲೈನ್‌ನಲ್ಲಿ ವಿಶೇಷವಾಗಿ ಕಾಡುಗೋಡಿ ಡಿಪೋದಲ್ಲಿ ಕಾಮಗಾರಿ ವಿಳಂಬವಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಸಲು ಸಾಧ್ಯವಾಗಲಿಲ್ಲ. ವಿಸ್ತೃತ ನೇರಳೆ ಲೈನ್‌ನಲ್ಲಿ ರೈಲು ಓಡಿಸಲು ಈ ಡಿಪೋ ಅಗತ್ಯವಿದೆ. ಕೆಲಸವನ್ನು ತ್ವರಿತಗೊಳಿಸಲು ನಾವು ನಮ್ಮ ಎಲ್ಲಾ ಸಂಪನ್ಮೂಲಗಳನ್ನು ಬಳಸುತ್ತಿದ್ದೇವೆ" ಎಂದು ಅಂಜುಮ್ ಪರ್ವೇಜ್ ಮಾಹಿತಿ ನೀಡಿದ್ದಾರೆ.
ಈ ಮಾರ್ಗವನ್ನು ತೆರೆಯುವುದರಿಂದ ವೈಟ್‌ಫೀಲ್ಡ್‌ನಲ್ಲಿ ಕೆಲಸ ಮಾಡುವ ಮತ್ತು ವಿವಿಧ ವಸತಿ ಪ್ರದೇಶಗಳಲ್ಲಿ ವಾಸಿಸುವ ಲಕ್ಷಾಂತರ ಜನರಿಗೆ ಸಹಾಯವಾಗುತ್ತದೆ. ನೇರಳೆ ಮಾರ್ಗವು ಕಾರ್ಯಗತಗೊಂಡರೆ ಬೆಂಗಳೂರು ಪಶ್ಚಿಮ ಭಾಗದಲ್ಲಿರುವ ಕೆಂಗೇರಿಯಿಂದ ಬೆಂಗಳೂರಿನ ಪೂರ್ವದಲ್ಲಿರುವ ವೈಟ್‌ಫೀಲ್ಡ್‌ಗೆ ಸಂಪರ್ಕ ಸಾಧ್ಯವಾಗಲಿದೆ. ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿವರೆಗೆ ವಿಸ್ತರಿಸಿದ ನೇರಳೆ ಮಾರ್ಗವು ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಕೆಂಗೇರಿಯಿಂದ ಚಲ್ಲಘಟ್ಟದವರೆಗಿನ ಮಾರ್ಗ ಮುಂದಿನ ವರ್ಷ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಚಲ್ಲಘಟ್ಟದಲ್ಲಿ ಡಿಪೋ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
Kshetra Samachara
01/10/2022 03:46 pm